
ಶಿವಮೊಗ್ಗ, ನವೆಂಬರ್ 26: ಪತಿ ಮತ್ತು ಆತನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ಡೆತ್ನೋಟ್ ಬರೆದಿಟ್ಟು ಮಹಿಳೆಯೋರ್ವರು ಭದ್ರಾ ಬಲದಂಡೆ ನಾಲೆಗೆ ಹಾರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಘಟನೆ ನಡೆದು ಮೂರು ದಿನಗಳಾಗಿದ್ದರೂ ನಾಲೆಗೆ ಹಾರಿರುವ ಮಹಿಳೆಯ ಪತ್ತೆ ಆಗಿಲ್ಲ. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಪತಿ ಮತ್ತು ಆತನ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಪತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೊಳೆಹೊನ್ನೂರು ಪೊಲೀಸರು ಈ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಭದ್ರಾವತಿಯ ಡಿ.ಬಿ. ಹಳ್ಳಿಯ ಲತಾ ಮತ್ತು ಶಿಕಾರಿಪುರ ತಾಲೂಕಿನ ದಿಂಡಿನಹಳ್ಳಿ ಗ್ರಾಮದ ಗುರುರಾಜ್ ಮದುವೆ 2025ರ ಏಪ್ರಿಲ್ 14ರಂದು ನೆರವೇರಿತ್ತು. ಭದ್ರಾ ಡ್ಯಾಂನ ಕೆಪಿಸಿಎಲ್ನಲ್ಲಿ ಎಇಇ ಆಗಿ ಗುರುರಾಜ್ ಸೇವೆ ಸಲ್ಲಿಸುತ್ತಿದ್ದರು. ಸರಕಾರಿ ಅಧಿಕಾರಿ ಎನ್ನುವ ಕಾರಣಕ್ಕೆ ಭರ್ಜರಿ ವರದಕ್ಷಿಣೆ ಕೊಟ್ಟು ಲತಾ ಪೋಷಕರು ಮಗಳ ಮದುವೆ ಮಾಡಿದ್ದರು. 30 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ಸೇರಿ ಸಿಮಾರು 60 ಲಕ್ಷ ರೂ.ಗಳನ್ನ ಖರ್ಚು ಮಾಡಿದ್ದರು. ಇಷ್ಟೆಲ್ಲಾ ವರದಕ್ಷಣೆ, ವರೋಪಚಾರ ಪಡೆದ್ರೂ ಅವರ ದಾಹ ಕಡಿಮೆ ಆಗಿರಲಿಲ್ಲ. ಮದುವೆ ನಡೆದ ಒಂದೇ ತಿಂಗಳಿಗೆ ಪತಿ ಮನೆಯವರ ಬಣ್ಣ ಲತಾ ಎದುರು ಬಯಲಾಗಿದೆ. ವರದಕ್ಷಿಣೆಗಾಗಿ ಪತಿ ಗುರುರಾಜ್ ಜೊತೆ ಆತನ ಮನೆಯವರೂ ಪೀಡಿಸಿದ್ದಾರೆ. ಒಂದೇ ಒಂದು ದಿನವೂ ಲತಾರನ್ನು ಚೆನ್ನಾಗಿ ನೋಡಿಕೊಳ್ಳದ ಗುರುರಾಜ್, ಪದೇ ಪದೇ ಕಿರುಕುಳ ನೀಡುತ್ತಿದ್ದ. ಪತ್ನಿ ಮುಂದೆಯೇ ಅಕ್ಕನ ಮಗಳ ಜೊತೆ ಸಲಿಗೆಯಿಂದ ಇರುತ್ತಿದ್ದ. ಅಲ್ಲದೆ ಇನ್ನೊಂದು ಯುವತಿಯ ಜೊತೆಗೂ ಚಾಟಿಂಗ್ ನಡೆಸುತ್ತಿದ್ದ. ಈ ಎಲ್ಲ ವಿಷಯವನ್ನೂ ಲತಾ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನನ್ ಮಗಳು ಇರುವಾಗಲೇ ಅಳಿಯ ಅಕ್ಕನ ಮಗಳ ಜತೆ..: ಸರ್ಕಾರಿ ನೌಕರ ಅಳಿಯನ ನವರಂಗಿ ಆಟ ಬಿಚ್ಚಿಟ್ಟ ಅತ್ತೆ
ಆಷಾಡಕ್ಕೆಂದು ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿಯ ತವರು ಮನೆಗೆ ಲತಾ ಬಂದಿದ್ದರು. ಆದ್ರೆ ಆಷಾಡ ಮುಗಿದ್ರೂ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಗುರುರಾಜ್ ಬಂದಿರಲೇ ಇಲ್ಲ. ಈ ಎಲ್ಲ ಘಟನೆಗಳಿಂದಾಗಿ ಲತಾ ಮಾನಸಿಕವಾಗಿ ನೊಂದಿದ್ದರು. ಹೀಗಾಗಿ ತನ್ನ ಸಾವಿಗೆ ಪತಿಯ ಅಕ್ಕಂದಿರಾದ ನಾಗರತ್ನಾ, ರಾಜೇಶ್ವರಿ, ಅತ್ತೆ ಶಾರದಮ್ಮ, ಪತಿಯ ಅಕ್ಕನ ಗಂಡ ಕೃಷ್ಣಪ್ಪ ಹಾಗೂ ಪತಿ ಗುರುರಾಜ್ ಕಾರಣ ಎಂದು ಲತಾ ಡೆತ್ನೋಟ್ನಲ್ಲಿ ಆರೋಪಿಸಿದ್ದಾರೆ. ನವೆಂಬರ್ 23ರಂದು ಭದ್ರಾವತಿಯ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಇರುವ ಭದ್ರಾ ಬಲದಂಡೆ ನಾಲೆಗೆ ಹಾರಿದ್ದಾರೆ. ಸಾಯುವ ಮೊದಲು ನಾಲೆಯ ಬಳಿ ಇರುವ ದೇಗುಲ ಬಳಿ ಬಳೆ ಹಾಗೂ ಮೊಬೈಲ್ ಇಟ್ಟು ಹೊಗಿದ್ದಾರೆ. ಮಗಳ ನಿರ್ಧಾರದಿಂದ ಪೋಷಕರು ಕಂಗಾಲಾಗಿದ್ದು, ನಾಲೆ ಬಳಿ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:18 pm, Wed, 26 November 25