ಶಿಕ್ಷಣ ಸಚಿವರ ತವರು ಜಿಲ್ಲೆಯೇ ಅವ್ಯವಸ್ಥೆಯ ಆಗರ: ಶಾಲಾ ಕೊಠಡಿಯಲ್ಲಿ ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ
ಶಿಕ್ಷಣ ಸಚಿವರ ತವರು ಜಿಲ್ಲೆ ಶಿವಮೊಗ್ಗದ ಸರಕಾರಿ ಪ್ರೌಢಶಾಲೆಯ ಅವ್ಯವಸ್ಥೆ ಹೇಳ ತೀರದ್ದು. ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು ವಿದ್ಯಾರ್ಥಿಗಳು ಶಾಲೆಯ ಒಳಗೂ ಛತ್ರಿ ಹಿಡಿದು ಪಾಠ ಕೇಳುವಂತಹ ಪರಿಸ್ಥಿತಿ ಇದೆ.
ಶಿವಮೊಗ್ಗ: ಸರಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ(Government School). ಎಷ್ಟೋ ಸರಕಾರಿ ಶಾಲೆಗಳಲ್ಲಿ ಇಂದಿಗೂ ಕನಿಷ್ಠ ಮೂಲಭೂತ ಸೌಲಭ್ಯ ಸಹ ಇಲ್ಲ. ಆದರೆ ದುಬಾರಿ ಶಿಕ್ಷಣ ವ್ಯವಸ್ಥೆಯಿಂದಾಗಿ ಬಡ ವಿದ್ಯಾರ್ಥಿಗಳು ವಿಧಿ ಇಲ್ಲದೇ ಸರಕಾರಿ ಶಾಲೆಯನ್ನೇ ಆಶ್ರಯಿಸುವಂತಾಗಿದೆ. ಅದರಲ್ಲೂ ಶಿಕ್ಷಣ ಸಚಿವರ(Madhu Bangarappa) ತವರು ಜಿಲ್ಲೆ ಶಿವಮೊಗ್ಗದ ಸರಕಾರಿ ಪ್ರೌಢಶಾಲೆಯ ಅವ್ಯವಸ್ಥೆ ಹೇಳ ತೀರದ್ದು. ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು ವಿದ್ಯಾರ್ಥಿಗಳು ಶಾಲೆಯ ಒಳಗೂ ಛತ್ರಿ ಹಿಡಿದು ಪಾಠ ಕೇಳುವಂತಹ ಪರಿಸ್ಥಿತಿ ಇದೆ.
ಮಲೆನಾಡಿನಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮಳೆ ಎಡಬಿಡದೇ ಸುರಿಯುತ್ತಿದೆ. ಆದರೆ ಸರಕಾರಿ ಪ್ರೌಢಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿರುವ ಪರಿಣಾಮ ಶಾಲೆಯ ಮಾಳಿಗೆ ಸೋರುತ್ತಿದೆ. ಸೋರುತ್ತಿರುವ ಕೊಠಡಿಯೊಳಗೆ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವಂತಾಗಿದೆ. ಈ ಸರಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10 ನೇ ತರಗತಿಯವರೆಗೆ ಸುಮಾರು 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವವರು ಎಲ್ಲರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಯಾವ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿಯುತ್ತದೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರೇ. ಶಿಕ್ಷಕರು ಆತಂಕದಲ್ಲೇ ಭೋಧನೆ ಮಾಡುವಂತಾಗಿದೆ.
ಪೋಷಕರು ಹಾಗು ಸ್ಥಳೀಯರು ಶಾಲಾ ಕಟ್ಟಡ ದುರಸ್ತಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಹಾಗು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವ ಹಾಗು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಈ ಬಗ್ಗೆ ಗಮನ ಹರಿಸುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ