ಸದ್ಯ ಎಲ್ಲೆಡೆ ಐಪಿಎಲ್ ಜ್ವರ. ನಗರದಿಂದ ಹಳ್ಳಿವರೆಗೆ ಎಲ್ಲರೂ ಐಪಿಎಲ್ ಗುಂಗಿನಲ್ಲಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ಕ್ರಿಕೆಟ್ ಆಡುವ ವಿಚಾರಕ್ಕೆ ಯುವಕರ ನಡುವೆ ಗಲಾಟೆ ಶುರುವಾಗಿದೆ. ಇದೇ ಗಲಾಟೆಯು ವಿಕೋಪಕ್ಕೆ ತಿರುಗಿದ ಪರಿಣಾಮ ಯುಕವನ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾರೆ… ಏನಿದು ಕ್ರಿಕೆಟ್ ಗಾಗಿ ಫೈಟ್ ಅಂತೀರಾ ಈ ಸ್ಟೋರಿ ನೋಡಿ. ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪ ಗ್ರಾಮದ ಹೊರವಲಯದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಒಂದು ಸಾವಿರ ನಗದು ಫಿಕ್ಸ್ ಮಾಡಿಕೊಂಡು ಮ್ಯಾಚ್ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಸುಧಾಕರ್ (27) ಎಂಬಾತ ಎಂಟ್ರಿ ಕೊಟ್ಟಿದ್ದಾನೆ. ಈತನೂ ಮ್ಯಾಚ್ ಆಡಲು ಮುಂದಾಗಿದ್ದಾನೆ. ಆದ್ರೆ ಸುಧಾಕರನನ್ನು ಅಲ್ಲಿರುವ ಯುವಕರು ಸೇರಿಸಿಕೊಂಡಿಲ್ಲ. ಈ ವಿಚಾರವಾಗಿ ಅಲ್ಲಿ ಸುಧಾಕರ್ ಮತ್ತು ಕೆಲ ಯುವಕರ ನಡುವೆ ಮಾತಿನ ಚಕಮಕಿಯಾಗಿದೆ.
ಒಂದೇ ಗ್ರಾಮಸ್ಥರು. ನಿತ್ಯ ಒಟ್ಟಿಗೆ ಆಟವಾಡುತ್ತಿದ್ದು, ಈ ದಿನ ಯಾಕೆ ಮ್ಯಾಚ್ ಗೆ ಸೇರಿಸಿಕೊಳ್ಳುತ್ತಿಲ್ಲವೆಂದು ಸುಧಾಕರ್ ಗರಂ ಆಗಿದ್ದಾನೆ. ಇದರಿಂದ ಕೋಪಗೊಂಡ ಪ್ರಶಾಂತ್ ಮತ್ತು ಧನಂಜಯ್ ಎಂಬಿಬ್ಬರೂ ಸೇರಿ ಸುಧಾಕರ್ ಗೆ ತಲೆ ಮತ್ತು ಮುಖ ಮತ್ತು ಕಣ್ಣಿಗೆ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಸುಧಾಕರ್ ಗಾಯಗೊಂಡು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಆಗಿದ್ದನು.
ಒಂದು ದಿನ ಚಿಕಿತ್ಸೆ ಬಳಿಕ ಈಗ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾನೆ. ಈತನ ಕಣ್ಣಿಗೆ ಬಲವಾಗಿ ಪೆಟ್ಟು ಬಿದ್ದಿದೆ. ಮೂಗಿನ ಮೂಳೆ ಮುರಿದು ಹೋಗಿದೆ. ಮೂಗಿನ ಒಂದೇ ಭಾಗದಿಂದ ಸುಧಾಕರ್ ಸದ್ಯ ಉಸಿರಾಡುತ್ತಿದ್ದಾನೆ. ಕೇವಲ ಕ್ರಿಕೆಟ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಮತ್ತು ಧನಂಜಯ್ ಮೇಲೆ ಕೇಸ್ ದಾಖಲು ಆಗಿದೆ. ಹಲ್ಲೆ ಮಾಡಿದ ಇಬ್ಬರೂ ಯುವಕರು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಆದ್ರೆ ಇವರನ್ನು ಗ್ರಾಮಾಂತರ ಪೊಲೀಸರು ಬಂಧಿಸುತ್ತಿಲ್ಲವೆಂದು ಹಲ್ಲೆಗೊಳಗಾದ ಯುವಕ ಸುಧಾಕರ್ ಆರೋಪ ಮಾಡಿದ್ದಾನೆ.
ಸುಧಾಕರ್ ಮನೆಗೆ ಒಬ್ಬನೇ ಮಗ . ಈತನೇ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದಾನೆ. ಸುಧಾಕರ್ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ಕೆಲಸದ ಬಿಡುವಿನಲ್ಲಿ ಗ್ರಾಮದ ಯುವಕರ ಜೊತೆ ಕ್ರಿಕೆಟ್ ಆಡುವುದು ಸುಧಾಕರ್ ಹವ್ಯಾಸ. ಹೀಗೆ ಗ್ರಾಮದ ಯುವಕರ ಜೊತೆ ಕ್ರಿಕೆಟ್ ಆಡಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಗ್ರಾಮದ ಯುವಕರು ಉದ್ದೇಶ ಪೂರ್ವಕವಾಗಿ ಸುಧಾಕರ್ ನನ್ನು ಮ್ಯಾಚ್ ಗೆ ಸೇರಿಸಿಕೊಳ್ಳದೆ ಅವಮಾನ ಮಾಡಿದ್ದಾರೆ. ಇನ್ನು ಸುಧಾಕರ್ ಯಾಕೇ ಹೀಗೆ ತಾರತಮ್ಯ ಅಂತಾ ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಇಬ್ಬರು ಯುವಕರು ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಸುಧಾಕರ್ ಜೀವಕ್ಕೆ ಅಪಾಯದಿಂದ ಪಾರಾಗಿದ್ದೇ ಒಂದು ಪವಾಡವಾಗಿದೆ. ಬ್ಯಾಟ್ ನಿಂದ ನಡೆದ ಹಲ್ಲೆಯಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರೆ ಸುಧಾಕರ್ ಅಲ್ಲಿಯೇ ಉಸಿರು ಚೆಲ್ಲುತ್ತಿದ್ದನು.
ಆತನ ಅದೃಷ್ಟ ಚೆನ್ನಾಗಿದೆ. ತಲೆಗೆ ಸಣ್ಣ ಪುಟ್ಟ ಗಾಯ ಮಾತ್ರ ಆಗಿದೆ. ಆದ್ರೆ ಮೂಗಿನ ಮೂಳೆ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದಿದೆ. ಇದರಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳಾದ್ರೂ ಅಗತ್ಯವಿದೆ. ಅಲ್ಲಿಯವರೆಗೆ ಮನೆಯ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲೆ ಬಿದ್ದಿದೆ. ತಂದೆಗೆ ಕಾಲು ಅಪಘಾತವಾಗಿದ್ದರಿಂದ ಯಾವುದೇ ಉದ್ಯೋಗವಿಲ್ಲ. ಮಗನ ಮೇಲೆ ಉದ್ದೇಶ ಪೂರ್ವಕವಾಗಿ ಯುಕವರು ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಲ್ಲೆಗೊಳಗಾದ ಯುವಕನ ತಾಯಿ ನೇತ್ರಾವತಿ ಪೊಲೀಸರಿಗೆ ಒತ್ತಾಯಿಸಿದ್ದಾಳೆ.
ಗ್ರಾಮೀಣ ಭಾಗದಲ್ಲೂ ಕ್ರಿಕೆಟ್ ಮತ್ತು ಬಾಜಿ ಜೋರಾಗಿ ನಡೆಯುತ್ತದೆ. ಇದೇ ಕ್ರಿಕೆಟ್ ಮ್ಯಾಚ್ ಆಡಲು ಹೋಗಿದ್ದ ಯುವಕನು ಸದ್ಯ ಪೆಟ್ಟು ತಿಂದು ಹಾಸಿಗೆ ಹಿಡಿಯುವಂತಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಇಂತಹ ಚಟುವಟಕೆಗಳ ಮೇಲೆ ಪೊಲೀಸರು ನಿಗಾಯಿಟ್ಟು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲದ್ದಿದ್ದರೆ ಕ್ರಿಕೆಟ್ ಬಾಜಿ ಬೆಟ್ಟಿಂಗ್ ನಡುವೆ ಯುವಕರ ಭವಿಷ್ಯ ಹಾಳಾಗುವುದರಲ್ಲಿ ಎರಡು ಮಾತಿಲ್ಲ.
ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ