ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆರಗ ಸಮೀಪ ಮಧ್ಯರಾತ್ರಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಅಲ್ಲಿ ಆಗಿದ್ದೇ ಬೇರೆ, ಹೇಳಿದ್ದೆ ಬೇರೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿವೆ. ಇನ್ನು ಈ ಪ್ರಕರಣವನ್ನು ದಿಕ್ಕು ತಪ್ಪಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಆಕೆಗೆ ಅನ್ಯಾಯವಾಗಿದ್ದರೆ ಪೊಲೀಸರು ಆರೋಪಿಗಳ ಮೇಲೆ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಪ್ರಕರಣ ಸಂಬಂಧ ನಾಲ್ವರ ಮೇಲೆ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಡೆದಿದ್ದೇನು?
ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ಸೋಮವಾರ ರಾತ್ರಿ 10.30ರ ಸಮಯದಲ್ಲಿ ದಲಿತ ಪುರುಷ ಮತ್ತು ಮಹಿಳೆ ಆರಗ ವೈನ್ ಶಾಪಿನಲ್ಲಿ ಮದ್ಯ ಖರೀದಿಸಲು ಹೋಗಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕರ ಪೈಕಿ ಇಬ್ಬರು ಇಲ್ಲಿ ಏಕೆ ಮಹಿಳೆಯರನ್ನು ಕರೆದುಕೊಂಡು ಬಂದಿದ್ದೀರಿ ಎಂದು ಕೇಳಿದ್ದಾರೆ. ಇದೆ ವಿಷಯಕ್ಕೆ ಗಲಾಟೆ ನಡೆದು ದೂರುದಾರಳ ಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಅತ್ಯಾಚಾರ ಯತ್ನದ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪ್ರಕರಣ ತನಿಖಾ ಹಂತದಲ್ಲಿದೆ. ಗಲಾಟೆಯಲ್ಲಿ ಗಾಯಗೊಂಡ ಮಹಿಳೆ ಮತ್ತು ಆತನ ಪತಿ ಪಟ್ಟಣದ ಸರಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಆರೋಗ್ಯ ಸರಿ ಇಲ್ಲದ ಕಾರಣ ಸೋಮವಾರ ಪತಿ ಜತೆ ಮಹಿಳೆ ತೀರ್ಥಹಳ್ಳಿ ಅಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ ದಲಿತ ದಂಪತಿಗಳ ಮೇಲೆ ಬೈಕ್ ಹರಿಬಿಟ್ಟು ಅರೋಪಿಗಳು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಕುಡಿತದ ಮತ್ತಿನಲ್ಲಿದ್ದ ನಾಲ್ವರು ಯುವಕರು 2 ಬೈಕ್‌ಗಳನ್ನು ಹರಿಬಿಟ್ಟ ಕಾರಣಕ್ಕೆ ಪತಿಯ ಕಾಲು, ತಲೆಗೆ ಏಟು ಬಿದ್ದು ಕೆಲ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಈ ಸಂದರ್ಭ ಆರೋಪಿಗಳು ಮಹಿಳೆಯ ಬಟ್ಟೆ ಹರಿದಿದ್ದಾರೆ. ಪ್ರಜ್ಞೆ ಹೀನಾಸ್ಥಿತಿಯಲ್ಲಿದ್ದ ಮಹಿಳೆಯ ಪತಿ ತಕ್ಷಣ ಎಚ್ಚರಗೊಂಡು ಕಿರುಚಿಕೊಂಡ ನಂತರ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ ಎಂದು ದೂರು ನೀಡಿದ್ದಾರೆ. ಆದರೆ ಸ್ಥಳೀಯರು ಹೇಳುವ ಪ್ರಕಾರ ಅಲ್ಲಿ ಸಣ್ಣ ಗಲಾಟೆ ನಡೆದಿದೆ. ಆದರೆ ಅತ್ಯಾಚಾರ ಯತ್ನ ನಡೆದಿರುವ ಬಗ್ಗೆ ಅನುಮಾನ ಇದೆ ಎನ್ನುತ್ತಾರೆ. ಮುಂದಿನ ಬೆಳವಣಿಗೆ ಪೊಲೀಸ್ ತನಿಖೆಯಲ್ಲಿ ಬಯಲಾಗಬೇಕಿದೆ.
ಕುಡುಕರ ಅವಾಂತರ
ಮಧ್ಯ ರಾತ್ರಿ ನಡೆದ ಈ ಗಲಾಟೆ ಕುಡಿದ ಮತ್ತಿನಲ್ಲಿ ನಡೆದಿದೆ. ಆದರೆ ತೀರ್ಥಹಳ್ಳಿ, ಗೃಹ ಸಚಿವರ ಹೆಸರಿಗೆ ಮಸಿ ಬಳಿಯಲು ಈ ಕೃತ್ಯವನ್ನು ಟ್ವಿಸ್ಟ್ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಅತ್ಯಾಚಾರ ಯತ್ನ ನಡೆಸಿದ್ದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕಿದೆ.
ಸಂತ್ರಸ್ತೆ ದೂರು ಆಧರಿಸಿ ಠಾಣೆಯಲ್ಲಿ FIR ದಾಖಲು
ಸಂತ್ರಸ್ತೆ ದೂರು ಆಧರಿಸಿ ತೀರ್ಥಹಳ್ಳಿ ಠಾಣೆಯಲ್ಲಿ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 341, 323, 353, 354a, 354b, 506 ಹಾಗೂ ಅಟ್ರಾಸಿಟಿ ಪ್ರಕರಣದಡಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸ್ತೇವೆ ಎಂದು ಎಸ್‌ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
Published On - 9:12 pm, Wed, 11 May 22