ಭದ್ರಾವತಿಯಲ್ಲಿ ಘರ್ ವಾಪಸಿ; ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಒಂದೇ ಕುಟುಂಬದ 9 ಜನ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್

| Updated By: ಆಯೇಷಾ ಬಾನು

Updated on: Dec 27, 2021 | 2:48 PM

ಗೃಹ ಸಚಿವರ ಜಿಲ್ಲೆಯಲ್ಲಿ ಸಂಘ ಪರಿಹಾರ ಘರ್ ವಾಪಸ್ ಅಭಿಯಾನ ಶುರು ಮಾಡಿದೆ. ನಿನ್ನೆ ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಮಂದಿ ಕ್ರೈಸ್ತಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

ಭದ್ರಾವತಿಯಲ್ಲಿ ಘರ್ ವಾಪಸಿ; ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಒಂದೇ ಕುಟುಂಬದ 9 ಜನ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್
ಭದ್ರಾವತಿಯಲ್ಲಿ ಘರ್ ವಾಪಸಿ; ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಒಂದೇ ಕುಟುಂಬದ 9 ಜನ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್
Follow us on

ಶಿವಮೊಗ್ಗ: ಮೊನ್ನೆಯಷ್ಟೇ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಿಲ್ ದೊಡ್ಡ ಸದ್ದು ಮಾಡಿತ್ತು. ವಿಧಾನಸಭೆಯಲ್ಲಿ ಮತಾಂತರ ನಿಷೇದ ಕಾಯ್ದೆ ಬಿಲ್ ಪಾಸ್ ಮಾಡುವಲ್ಲಿ ಬಿಜೆಪಿ ಸರಕಾರ ಯಶಸ್ವಿಯಾಗಿತ್ತು. ಈ ನಡುವೆ ಗೃಹ ಸಚಿವರ ಜಿಲ್ಲೆಯಲ್ಲಿ ಸಂಘ ಪರಿಹಾರ ಘರ್ ವಾಪಸ್ ಅಭಿಯಾನ ಶುರು ಮಾಡಿದೆ. ನಿನ್ನೆ ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಮಂದಿ ಕ್ರೈಸ್ತಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ. ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿಗಳಾದ ಜಯಶೀಲನ್ ಮತ್ತು ಜಯಮ್ಮ ಎಂಬುವರು ತಮ್ಮ ಕುಟುಂಬದ ಸಮೇತ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

ಜಯಶೀಲನ್ ಅವರ ತಂದೆ ಏಳುಮಲೈ ಎನ್ನುವವರು ಸುಮಾರು 40 ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ, ಕುಟುಂಬದವರಾರೂ ಚರ್ಚ್‌ಗೆ ಹೋಗುತ್ತಿರಲಿಲ್ಲ. ಕ್ರೈಸ್ತಧರ್ಮದ ಪ್ರಾರ್ಥನೆ ಮಾಡದೇ ಅವರು ಹಿಂದೂ ಧರ್ಮದ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರಂತೆ. ಎರಡು ವರ್ಷಗಳ ಹಿಂದಿನಿಂದ ಜಯಶೀಲನ್ ಮತ್ತು ಅವರ ಕುಟುಂಬ ಹಿಂದೂ ಧರ್ಮಕ್ಕೆ ಮರಳುವುದಕ್ಕೆ ಮುಂದಾಗಿದ್ದರು. ಅಂತರಗಂಗೆ ಗ್ರಾಮದ ಜಯಶೀಲನ್, ಜಯಮ್ಮ ಹಿರಿಯ ಮಗ ಪ್ರಭಾಕರನ್, ಪತ್ನಿ ಲಲಿತಾ, ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ್, ಪತ್ನಿ ಶ್ವೇತಾ, ಪುತ್ರಿ ಪೃಥ್ವಿ ಅವರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ಜಯಶೀಲನ್ ಕುಟುಂಬದವರು ಹಿಂದೂ ಧರ್ಮಕ್ಕೆ ಮರಳುವ ವಿಚಾರ ಭದ್ರಾವತಿಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆ ಮುಖಂಡರಿಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಭದ್ರಾವತಿಯ ಜನ್ನಾಪುರ ಶ್ರೀ ರಾಮ ಭಜನಾಳಿಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಒಂದೇ ಕುಟುಂಬದ ಒಂಭತ್ತು ಮಂದಿಯನ್ನು ಹಿಂದೂ ಧರ್ಮಕ್ಕೆ ಸ್ವಾಗತ ಕೋರಲಾಯಿತು. ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಿಂದೂ ಧರ್ಮ ಧೀಕ್ಷೆಯ ಕಾರ್ಯಕ್ರಮ ನೆರವೇರಿದೆ.

ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ ಅವರು ಕಾರ್ಯಕ್ರಮದಲ್ಲಿ ಮತಾಂತರ ಕುರಿತು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಆಮೀಷದಿಂದ ಅಮಾಯಕರನ್ನು ಬಲವಂತದಿಂದ ಮತಾಂತರಗೊಳಿಸಲಾಗುತ್ತಿದೆ. ಮತಾಂತರಕ್ಕೆ ವಿದೇಶದಿಂದ ಹಣ ಬಳಕೆಯಾಗುತ್ತಿದೆ. ಇಂತಹ ಹಣದಿಂದ ಮತಾಂತರದಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂದರು.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಇದನ್ನೂ ಓದಿ: ಕಾನ್ಪುರದ ಉದ್ಯಮಿ ಮನೆ ಮೇಲೆ ಜಿಎಸ್​ಟಿ ಅಧಿಕಾರಿಗಳಿಂದ ದಾಳಿ; ನಗದು ಎಣಿಕೆಯೇ ಮುಗಿಯುತ್ತಿಲ್ಲ, ಬೀಗ ತೆಗೆಯಲೂ ಸಾಧ್ಯವಾಗುತ್ತಿಲ್ಲ !