ಶಿವಮೊಗ್ಗ: ಸರ್ಕಾರಿ ಶಾಲೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಚಿವರು ಹೇಳಿಕೊಂಡು ಓಡುತ್ತಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yadiyurappa) ಅವರ ತವರು ಜಿಲ್ಲೆಯಲ್ಲೇ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯವಿಲ್ಲ. ಜಿಲ್ಲೆಯ ಸಾಗರ (Sagar) ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (Government Junior Primary School) ಶೌಚಾಲಯಕ್ಕೆ ಬಾಗಿಲಿಲ್ಲ. ಮುರಿದ ಶೌಚಾಲಯ ಬಾಗಿಲಿಗೆ ಸೀರೆ ಕಟ್ಟಿ ಮಕ್ಕಳು ಉಪಯೋಗಿಸುತ್ತಿದ್ದಾರೆ.
ಶರಾವತಿ ಹಿನ್ನೀರಿನ ಗುಡ್ಡಗಾಡು ಪ್ರದೇಶದ ಗ್ರಾಮಗಳ ಮಕ್ಕಳಿಗೆ ಅನುಕೂಲವಾಗಲೆಂದು ಸಾಗರ ಹಾಗೂ ಹೊಸನಗರ ತಾಲೂಕಿನ ಗಡಿರೇಖೆಗೆ ಹೊಂದಿಕೊಂಡಿರುವ ಏಳಿಗೆ ಗ್ರಾಮದಲ್ಲಿ ಶಾಲೆಯನ್ನು ನಿರ್ಮಿಸಲಾಗಿದೆ. ಶಾಲೆಗೆ, ಏಳಿಗೆ, ಕಿರತೋಡಿ ಮತ್ತೀತರ ಗ್ರಾಮದ ಮಕ್ಕಳು ಬರುತ್ತಾರೆ. ಸದ್ಯ ಶಾಲೆಯಲ್ಲಿ 13 ಮಕ್ಕಳು ಓದುತ್ತಿದ್ದಾರೆ. ಸರ್ಕಾರ ಹೊಸದಾಗಿ, ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಆದರೆ ಈ ಶಾಲೆಯ ಕಟ್ಟಡ ಹಳೆಯದಾಗಿದ್ದು, ಇನ್ನೂ ಕೂಡ ದುರಸ್ಥಿ ಕಾರ್ಯವನ್ನು ಆರಂಭಿಸಿಲ್ಲ.
ಮಕ್ಕಳು ದುರಸ್ಥಿತಿಯಲ್ಲಿರುವ ಹಳೇ ಕಟ್ಟಡದಲ್ಲೇ ಪಾಠ ಕೇಳುತ್ತಿದ್ದಾರೆ. ಇನ್ನು ಶಾಲೆಗೆ ಕಳೆದ 10 ವರ್ಷಗಳಿಂದ ಖಾಯಂ ಶಿಕ್ಷಕರೇ ಇಲ್ಲ. ನಿಯೋಜಿತ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಯುತ್ತಿದೆ. ಶಾಲೆಯ ಅವ್ಯವಸ್ಥೆ ಬಗ್ಗೆ ಗ್ರಾಮ ಪಂಚಾಯಿತಿ, ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರ್ತಾಳ ಹಾಲಪ್ಪ ಅವರ ಗಮಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸದ ಶಾಸಕರ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಕುರಿತಾಗಿ ಹಲವು ಬಾರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಇಲಾಖೆ ಮಾತ್ರ ನಿರ್ಲಕ್ಷ ವಹಿಸುತ್ತಿದೆ. ಸೌಲಭ್ಯ ನೀಡದ ಸರ್ಕಾರ ಹಾಗೂ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ