ಶಿರಾಳಕೊಪ್ಪ: 2ನೇ ವಿವಾಹವಾದ ನಿವೃತ್ತ ಪೊಲೀಸ್ ತಂದೆಯನ್ನು ಮಕ್ಕಳೇ ಸುಪಾರಿ ಕೊಟ್ಟು ಸಾಯಿಸಿದರು! ಅಂಥಾ ಕಾರಣವೇನಿತ್ತು?
shivamogga crime: ಹತ್ಯೆಗೀಡಾದ ನಾಗೇಂದ್ರಪ್ಪ ಎರಡನೆ ಮದುವೆ ಮಾಡಿಕೊಂಡಿದ್ದು, ಅವರಿಗೆ ಆರು ತಿಂಗಳ ಒಂದು ಗಂಡು ಮಗುವೂ ಆಗಿತ್ತು. ನಾಗೇಂದ್ರಪ್ಪ ತಾವು ನಿರ್ಮಾಣ ಮಾಡುತ್ತಿರುವ ಮನೆಯನ್ನು ದಾನಪತ್ರದ ಮೂಲಕ ಎರಡನೆ ಹೆಂಡತಿ ಹೆಸರಿಗೆ ಮಾಡಿದ್ದರು.
ಅಂದು ಮಣ್ಣಿನ ರಸ್ತೆ ಪಕ್ಕದ ಚರಂಡಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಠಾಣೆ ಪೊಲೀಸರು (shiralakoppa police) ಪ್ರಕರಣದ ತನಿಖೆ ಆರಂಭಿಸಿ ಶವ ಯಾರದ್ದು ಎಂದು ಗುರುತು ಪತ್ತೆ ಮಾಡಲು ಮುಂದಾದಾಗ ಆ ಶವ ನಿವೃತ್ತ ಎಆರ್ ಎಸ್ ಐ ನಾಗೇಂದ್ರಪ್ಪ ಎಂಬುದು ತಿಳಿದುಬಂದಿತ್ತು. ಬಳಿಕ ನಾಗೇಂದ್ರಪ್ಪ ಅವರ ಸಾವಿನ ತನಿಖೆ ಆರಂಭಿಸಿದ ಪೊಲೀಸರಿಗೇ ಶಾಕ್ ಆಗಿತ್ತು. ಹೌದು ನಾಗೇಂದ್ರಪ್ಪ ಅವರ ಕೊಲೆಗೆ ಕಾರಣರಾಗಿದ್ದು ಇನ್ಯಾರೋ ಅಲ್ಲ ಸ್ವತಃ ಅವರ ಮಕ್ಕಳೇ ಎಂಬುದು ಶಾಕಿಂಗ್ ವಿಷಯವಾಗಿತ್ತು. ಆಸ್ತಿಗಾಗಿ ಮಕ್ಕಳೇ ಜನ್ಮದಾತನನ್ನೇ (Son) ಸುಪಾರಿ ಕೊಟ್ಟು ಕೊಲೆ (supari killing) ಮಾಡಿಸಿರುವ ಪ್ರಕರಣವನ್ನು ಕೊನೆಗೂ ಶಿರಾಳಕೊಪ್ಪ ಠಾಣೆ ಪೊಲೀಸರು ಬೇಧಿಸಿದ್ದಾರೆ. ಮರ್ಡರ್ ಸುಪಾರಿ ಕೇಸ್-ಮಕ್ಕಳಿಬ್ಬರು ಅಂದರ್ ಈ ಕುರಿತು ಒಂದು ವರದಿ ಇಲ್ಲಿದೆ (shivamogga crime).
ಕೊಲೆಯಾದ ನಾಗೇಂದ್ರಪ್ಪ ಅವರು ಎಆರ್ ಎಸ್ ಐ ಆಗಿ ನಿವೃತ್ತರಾಗಿದ್ದರು. ಬಳಿಕ ತಮ್ಮ ಸ್ವಂತ ಊರಾದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಭೋಗಿ ಗ್ರಾಮದಲ್ಲಿ ನೆಲೆಸಿದ್ದರು. ತಾವು ನಿವೃತ್ತರಾಗುವುದಕ್ಕೂ ಮೊದಲು ಭೋಗಿ ಗ್ರಾಮದಲ್ಲಿರವ ಐದು ಎಕರೆ ಜಮೀನಿನಲ್ಲಿ ಅಡಕೆ ಬೆಳೆಯನ್ನು ಹಾಕಿದ್ದು, ಇದೀಗ ಅಡಕೆ ಫಸಲು ಆರಂಭಗೊಂಡಿತ್ತು. ಈ ಮಧ್ಯೆ ನಾಗೇಂದ್ರಪ್ಪ ಅವರ ಮಕ್ಕಳು ತಮಗೆ ಆಸ್ತಿಯಲ್ಲಿ ಪಾಲು ಬೇಕು ಎಂದು ಗಂಟು ಬಿದ್ದಿದ್ದರು. ಆದರೆ ನಾಗೇಂದ್ರಪ್ಪ ತನ್ನ ಮಕ್ಕಳಿಗೆ ಆಸ್ತಿ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ನಾಗೇಂದ್ರಪ್ಪ ಅವರ ಎರಡನೇ ಮಗ ಉಮೇಶ್ (ಕೆಎಸ್ ಆರ್ ಪಿ ಹೆಡ್ ಕಾನ್ಸ್ ಟೆಬಲ್) ತಂದೆ ವಿರುದ್ಧ ಭದ್ರಾವತಿ ಕೋರ್ಟ್ ನಲ್ಲಿ ದಾವೆ ಹೂಡಿದ್ದ. ಹೀಗಿರುವಾಗ ನಿವೃತ್ತರಾದ ನಾಗೇಂದ್ರಪ್ಪ ಎರಡನೆ ಮದುವೆ ಮಾಡಿಕೊಂಡಿದ್ದು, ಅವರಿಗೆ ಆರು ತಿಂಗಳ ಒಂದು ಗಂಡುಮಗುವೂ ಆಗಿತ್ತು. ನಾಗೇಂದ್ರಪ್ಪ ತಾವು ನಿರ್ಮಾಣ ಮಾಡುತ್ತಿರುವ ಮನೆಯನ್ನು ದಾನಪತ್ರದ ಮೂಲಕ ಎರಡನೆ ಹೆಂಡತಿ ಹೆಸರಿಗೆ ಮಾಡಿದ್ದರು. ಇದು ಮೊದಲ ಪತ್ನಿಯ ಇಬ್ಬರು ಮಕ್ಕಳಾದ ಮಂಜುನಾಥ್ ಹಾಗೂ ಉಮೇಶ್ ಅವರನ್ನು ಕೆರಳಿಸಿತ್ತು. ತಂದೆಯನ್ನು ಹೀಗೆಯೇ ಬಿಟ್ಟರೆ ಉಳಿದ ಆಸ್ತಿಯನ್ನೂ ಎರಡನೆಯ ಹೆಂಡತಿ ಹೆಸರಿಗೆ ಮಾಡುತ್ತಾರೆ ಎಂದು ಭಾವಿಸಿದ ಮಕ್ಕಳು ತಂದೆಯ ಕೊಲೆಗೆ ಮಾಸ್ಟರ್ ಪ್ಲಾನ್ ರೂಪಿಸಿದರು ಎಂಬ ಮಾಹಿತಿ ನೀಡಿದ್ದಾರೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್.
ತಂದೆಯನ್ನು ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿದ ಮಂಜುನಾಥ್ ಹಾಗೂ ಉಮೇಶ್ ಭೋಗಿ ಗ್ರಾಮದ ರಿಜ್ವಾನ್ ಗೆ ಸುಪಾರಿ ನೀಡಿದ್ದರು. ನಮ್ಮ ತಂದೆಯನ್ನು ಆಕ್ಸಿಡೆಂಟ್ ಮಾಡಿ ಕೊಲೆ ಮಾಡಿದರೆ ಐದು ಲಕ್ಷ ರೂಪಾಯಿ ನೀಡುವುದಾಗಿ ಸುಪಾರಿ ನೀಡಿದ್ದರು. ಆಗ ರಿಜ್ವಾನ್ ನವೆಂಬರ್ 9ರಂದು ಶಿಕಾರಿಪುರ ತಾಲೂಕಿನ ಕುಸ್ಕೂರು ಬಳಿ ಲಗೇಜ್ ಆಟೋದಲ್ಲಿ ನಾಗೇಂದ್ರಪ್ಪ ಅವರಿಗೆ ಗುದ್ದಿಸಿದ್ದರು. ಆದರೆ ನಾಗೇಂದ್ರಪ್ಪ ಅದೃಷ್ಟವಶಾತ್ ಅಂದು ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.
ಮೊದಲ ಬಾರಿಗೆ ನಾಗೇಂದ್ರಪ್ಪ ಬದುಕಿದ್ದರಿಂದ ಎರಡನೇ ಹಂತದಲ್ಲಿ ನಾಗೇಂದ್ರಪ್ಪನನ್ನು ಮುಗಿಸಲೇಬೇಕು ಎಂದು ತೀರ್ಮಾನಿಸಿದ್ದ ಆರೋಪಿಗಳು ನವೆಂಬರ್ 29ರಂದು ನಾಗೇಂದ್ರಪ್ಪ ಭದ್ರಾವತಿ ಕೋರ್ಟ್ ನಿಂದ ಶಿಕಾರಿಪುರಕ್ಕೆ ಬರುವಾಗ ಬಲವಂತವಾಗಿ ಅವರನ್ನು ತಮ್ಮ ಲಗೇಜ್ ಆಟೋಗೆ ಹತ್ತಿಸಿಕೊಂಡಿದ್ದರು.
ಬಳಿಕ ಶಿಕಾರಿಪುರ ತಾಲೂಕಿನ ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದು ಅಲ್ಲಿ ನಾಗೇಂದ್ರಪ್ಪ ಅವರಿಗೆ ನೀರಿನಲ್ಲಿ ಮತ್ತು ಬರುವ ಔಷಧ ಕುಡಿಸಿ, ಆಟೋದಲ್ಲಿಯೇ ನಾಗೇಂದ್ರಪ್ಪ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ನಾಗೇಂದ್ರಪ್ಪ ಅವರ ಶವವನ್ನು ಆಟೋದಲ್ಲಿಯೇ ಸಾಗಿಸಿ ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿದ್ದ ಚರಂಡಿಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಮಿಥುನ್ ಕುಮಾರ್, ಶಿವಮೊಗ್ಗ ಎಸ್ ಪಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾಗೇಂದ್ರಪ್ಪ ಅವರ ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಠಾಣೆ ಪೊಲೀಸರು ನಾಗೇಂದ್ರಪ್ಪ ಅವರ ಮೊದಲ ಪುತ್ರ ಮಂಜುನಾಥನನ್ನು ವಿಚಾರಣೆಗೊಳಪಡಿಸಿದಾಗ ಆಸ್ತಿಗಾಗಿ ತಾವೇ ತಮ್ಮ ತಂದೆಯನ್ನು ಸುಪಾರಿ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)
ಹೆಚ್ಚಿನ ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:53 am, Tue, 13 December 22