ಶಿವಮೊಗ್ಗ, ಮಾ.17: ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಗಾಳಿ ಬೀಸುತ್ತಿದೆ. ಈ ಪೈಕಿ ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರ ಕೂಡ ಒಂದು. ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ತೊಡೆತಟ್ಟಿದ ಕೆಎಸ್ ಈಶ್ವರಪ್ಪ (KS Eshwarappa) ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರ ಸಂಧಾನ ವಿಫಲದ ನಂತರ ಕೇಂದ್ರದ ನಾಯಕರು ಈಶ್ವರಪ್ಪ ಅವರನ್ನು ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ.
ಹೌದು, ರಾಜ್ಯ ನಾಯಕರು ಈಶ್ವರಪ್ಪ ಅವರನ್ನು ಮನವೊಲಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಲ್ ಮತ್ತು ತಂಡ ಇಂದು ಈಶ್ವರಪ್ಪ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದೆ. ಮಾತುಕತೆಯ ನಡುವೆ ಎದ್ದು ಹೊದರ ಹೋದ ಈಶ್ವರಪ್ಪ ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಂದು ಗಂಟೆಯಾದರೂ ವಾಪಸ್ ಆಗದ ಹಿನ್ನೆಲೆ ಕಾದು ಕಾದು ಸುಸ್ತಾದ ವರಿಷ್ಠರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದಾರೆ.
ಬಳಿಕ ಮಾತನಾಡಿದ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯದ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಭೇಟಿಗೆ ಬಂದಿದ್ದರು. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿದರು. ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ಇದನ್ನೂ ಓದಿ: ಕೇಂದ್ರ ನಾಯಕರನ್ನು ಮನೆಯಲ್ಲಿ ಕೂರಿಸಿ ಹೊರ ಹೋದ ಈಶ್ವರಪ್ಪ: ಶಮನವಾಗದ ಬಂಡಾಯ
ಕಾಂತೇಶ್ ಅವರನ್ನು ಎಂಎಲ್ಸಿ ಮಾಡುವುದಾಗಿ ತಿಳಿಸಿದರು. ಇದು ಎಂಎಲ್ಎ, ಎಂಪಿ ಮಾಡುವ ವಿಚಾರವಲ್ಲ. ಪಕ್ಷ ಶುದ್ದಿಕರಣವಾಗಬೇಕು. ರಾಜ್ಯದ ಅನೇಕ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ, ಅದು ಸರಿಯಾಗಬೇಕು. ಹಿಂದುತ್ವವಾದಿಗಳನ್ನು ತುಳಿಯುತ್ತಿದ್ದಾರೆ. ಅದು ಸರಿಯಾಗಬೇಕು. ಹಿಂದುತ್ವ ಉಳಿಸಬೇಕು, ಪಕ್ಷ ಉಳಿಸಬೇಕು, ಕುಟುಂಬ ರಾಜಕಾರಣ ದೂರ ಆಗಬೇಕು ಎಂದು ಹೇಳಿದ್ದಾಗಿ ತಿಳಿಸಿದರು.
ನರೇಂದ್ರ ಮೋದಿಯವರ ಆಶಯದಂತೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬದಲಾವಣೆ ಬರಬೇಕು. ನನ್ನ ಜೊತೆಗಿನ ಚರ್ಚೆಯನ್ನು ಬಿಜೆಪಿ ಹೈಕಮಾಂಡ್ಗೆ ನಾಯಕರು ತಿಳಿಸುತ್ತಾರೆ. ಮೋದಿ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದರು. ನಾನು ಬರುವುದಿಲ್ಲ, ಚುನಾವಣೆಯಲ್ಲಿ ಗೆದ್ದು ಮೋದಿ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದೇನೆ ಎಂದರು.
ಮೋದಿಯನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾನು ಜೊತೆಗಿರುವುದಾಗಿ ನಾಯಕರಿಗೆ ತಿಳಿಸಿದ್ದೇನೆ. ಇಡೀ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು, ಈಡಿಗರು ಸೇರಿದಂತೆ ನಾವೆಲ್ಲ ಹಿಂದೂಗಳು ನಿಮ್ಮ ಜೊತೆ ಇರುತ್ತೇವೆ ಎಂದಿದ್ದಾರೆ. ಹಿಂದುತ್ವ ಹಾಗೂ ಬಿಎಸ್ ಯಡಿಯೂರಪ್ಪ ಕುಟುಂಬದಿಂದ ಆದ ಅನ್ಯಾಯದ ಹಿನ್ನೆಲೆ ನನ್ನ ಚುನಾವಣೆಯಲ್ಲಿ ಕೈ ಹಿಡಿಯುತ್ತದೆ ಎಂದರು.
ಈಶ್ವರಪ್ಪನವರ ಮನವೊಲಿಸುವ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಈಶ್ವರಪ್ಪ ಆಕ್ರೋಶದಿಂದ ಬಂಡಾಯ ಸ್ಪರ್ಧೆ ಮಾಡುತ್ತಾರೆ ಎಂಬ ನಂಬಿಕೆ ಬಿಜೆಪಿಯವರಲ್ಲಿ ಇಲ್ಲ. ನಾನು ಆಕ್ರೋಶದಿಂದ ಮಾತನಾಡುತ್ತಿಲ್ಲ, ಯಡಿಯೂರಪ್ಪ ಕುಟುಂಬದ ವ್ಯವಸ್ಥೆಯ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ: ಯಾರೋ ಒಬ್ಬರ ಮಾತು ಕೇಳಿ ಟಿಕೆಟ್ ಕೊಡಲ್ಲ: ಈಶ್ವರಪ್ಪಗೆ ವಿಜಯೇಂದ್ರ ಕೌಂಟರ್
ಆರು ತಿಂಗಳು ಹಠ ಹಿಡಿದು ವಿಜೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದರು. ವಿಜೇಂದ್ರ ಲಿಂಗಾಯತ ಎಂದು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರಾ? ಪಂಚಮಸಾಲಿ ಲಿಂಗಾಯತ ಯತ್ನಾಳ್ ಬಗ್ಗೆ ಯಾಕೆ ಹಠ ಹಿಡಿಯಲಿಲ್ಲ? ಒಕ್ಕಲಿಗ ಸಿಟಿ ರವಿಯನ್ನು ಯಾಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲ? ಶೋಭಾ ಕರಂದ್ಲಾಜೆಗೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಸಿಟಿ ರವಿಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ಎಂದು ಈಶ್ವರಪ್ಪ ಅವರು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಜನತೆ ನನ್ನನ್ನು ಗೆಲ್ಲಿಸುತ್ತಾರೆ. ನಾನು ಹೋರಾಟ ನಡೆಸುತ್ತಿರುವುದೇ ಬಿಜೆಪಿಯಲ್ಲಿನ ಬದಲಾವಣೆಗಾಗಿ. ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಕೆಎಸ್ ಈಶ್ವರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರಿಗೆ ಘೋಷಣೆಯಾಗಿದೆ. ಈಶ್ವರಪ್ಪ ಪುತ್ರ ಕಾಂತೇಶ್ ಹಾವೇರಿ ಕ್ಷೇತ್ರದ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಕೊನೆ ಕ್ಷಣದಲ್ಲಿ ಶಾಸಕ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ಘೋಷಣೆಯಾಗಿದೆ. ಕಾಂತೇಶ್ಗೆ ಟಿಕೆಟ್ ತಪ್ಪಿಸಿದ್ದೇ ಯಡಿಯೂರಪ್ಪ ಎಂಬುದು ಈಶ್ವರಪ್ಪ ಅವರ ಆರೋಪವಾಗಿದೆ. ಇದೇ ಕಾರಣಕ್ಕೆ ಯಡಿಯೂರಪ್ಪ ಕುಟುಂಬದ ವಿರುದ್ಧ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Sun, 17 March 24