ಯಾರೋ ಒಬ್ಬರ ಮಾತು ಕೇಳಿ ಟಿಕೆಟ್ ಕೊಡಲ್ಲ: ಈಶ್ವರಪ್ಪಗೆ ವಿಜಯೇಂದ್ರ ಕೌಂಟರ್
ಪುತ್ರ ಕೆಇ ಕಾಂತೇಶ್ಗೆ ಹಾವೇರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಕೆಎಸ್ ಈಶ್ವರಪ್ಪ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಪಕ್ಷವನ್ನು ಯಡಿಯೂರಪ್ಪ ಮತ್ತು ಮಕ್ಕಳ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಶಿವಮೊಗ್ಗದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರ ಎರಡೂ ತಂಡದ ಸಂಧಾನ ವಿಫಲವಾಗಿದೆ. ಈ ನಡುವೆ ಈಶ್ವರಪ್ಪ ಮಾಡಿದ ಆರೋಪಗಳಿಗೆ ವಿಜಯೇಂದ್ರ ಕೌಂಟರ್ ಕೊಟ್ಟಿದ್ದಾರೆ.
ಬೆಂಗಳೂರು, ಮಾ.17: ಪುತ್ರ ಕೆಇ ಕಾಂತೇಶ್ಗೆ (KE Kantesh) ಹಾವೇರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಕೆಎಸ್ ಈಶ್ವರಪ್ಪ (KS Eshwarappa) ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಪಕ್ಷವನ್ನು ಯಡಿಯೂರಪ್ಪ ಮತ್ತು ಮಕ್ಕಳ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಶಿವಮೊಗ್ಗದಲ್ಲಿ (Shivamogga) ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರ ಎರಡೂ ತಂಡದ ಸಂಧಾನ ವಿಫಲವಾಗಿದೆ. ಈ ನಡುವೆ ಈಶ್ವರಪ್ಪ ಮಾಡಿದ ಆರೋಪಗಳಿಗೆ ವಿಜಯೇಂದ್ರ ಕೌಂಟರ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಯೇಂದ್ರ, ಎಲ್ಲದಕ್ಕೂ ಕ್ಷೇತ್ರದ ಜನರು, ರಾಜ್ಯದ ಜನ ಉತ್ತರ ಕೊಡುತ್ತಾರೆ. ನಾನು ಹೆಚ್ಚಿಗೆ ಮಾತಾಡಲು ಇಷ್ಟ ಪಡಲ್ಲ. ಈಶ್ವರಪ್ಪ ನಮ್ಮ ಪಕ್ಷದ ಹಿರಿಯರು. ಅವರ ಜೊತೆ ಮಾತಾಡುತ್ತೇವೆ. ಅವರು ನೋವಿನಲ್ಲಿ ಇದ್ದಾರೆ, ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ ಎಂದರು.
ಇದನ್ನೂ ಓದಿ: ಕೆಎಸ್ ಈಶ್ವರಪ್ಪ ನಿವಾಸಕ್ಕೆ ನಾಳೆ ಮೋದಿ ಭೇಟಿ? ಸುದ್ದಿಗೋಷ್ಠಿ ವೇಳೆ ಬಂತು ಫೋನ್
ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ. ಕೇಂದ್ರದ ವರಿಷ್ಠರು ಎಲ್ಲರೂ ಕೂತು ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ ಆಗಿದೆ. ಒಬ್ಬರ ತೀರ್ಮಾನದಿಂದ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು ಕಾಂತೇಸ್ಗೆ ಟಿಕೆಟ್ ತಪ್ಪಿಸಿದ್ದಾರೆ ಎನ್ನುವ ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ-ಈಶ್ವರಪ್ಪ ನಡುವೆ ಮಾತುಕತೆ ಬಗ್ಗೆ ಗೊತ್ತಿಲ್ಲ: ಆರ್ ಅಶೋಕ
ನಾನು ಕೂಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವೊಲಿಸ್ತೇನೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ನಡುವೆ ಆಗಿರುವ ಮಾತುಕತೆ ಬಗ್ಗೆ ಗೊತ್ತಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಏನೇನು ಮಾತುಕತೆ ಆಗಿದೆಯೋ ಗೊತ್ತಿಲ್ಲ. ಆದರೆ ನಮ್ಮ ಕೈಲಾದಷ್ಟು ಸಂಧಾನ ಮಾತಾಡ್ತೇವೆ. ಟಿಕೆಟ್ ಕೊಟ್ಟಿದ್ದು ಪಕ್ಷ, ಅದರ ಬಗ್ಗೆ ನಾವು ಮಾತನಾಡಲು ಆಗಲ್ಲ ಎಂದರು.
ಮುಂದುವರಿದ ಈಶ್ವರಪ್ಪ ಮನವೊಲಿಸುವ ಕಸರತ್ತು
ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಮುನಿಸಿಕೊಂಡಿರುವ ಕೆಎಸ್ ಈಶ್ವರಪ್ಪ ಅವರನ್ನು ಮನವೊಲಿಸುವ ಕಸರತ್ತು ಮುಂದುವರಿದಿದೆ. ಇಂದು ಬೆಳಗ್ಗೆ ರಾಜ್ಯದ ಬಿಜೆಪಿ ನಾಯಕರು ಸಂಧಾನ ನಡೆಸುಲು ಯತ್ನಿಸಿ ವಿಫಲರಾದರು. ಬಳಿಕ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಮತ್ತು ತಂಡ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆಗೆ ನಡೆಸಿತು. ಈ ಮಧ್ಯೆ, ಈಗ ಬರುತ್ತೇನೆ ಎಂದು ಹೇಳಿ ವರಿಷ್ಠರನ್ನ ಮನೆಯಲ್ಲಿ ಕೂರಿಸಿ ಹೊರ ಹೋದ ಈಶ್ವರಪ್ಪ ವಾಪಸ್ ಬಂದೇ ಇಲ್ಲ. ಹೀಗಾಗಿ ಕಾದುಕಾದು ಸುಸ್ತಾದ ಕೇಂದ್ರದ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದಾರೆ.
ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಬಂಡಾಯ ಸ್ಪರ್ಧೆ ಖಚಿತ ಎಂದ ಕೆಎಸ್ ಈಶ್ವರಪ್ಪ
ಸಂಧಾನದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಎಂಎಲ್ಸಿ ರವಿಕುಮಾರ್, ಈಶ್ವರಪ್ಪ ಅವರ ಮನವೊಲಿಸುವ ಕೆಲಸ ಮುಂದುವರಿದಿದೆ. ಈಶ್ವರಪ್ಪ ಬಂಡಾಯ ಶಮನ ಆಗುತ್ತೆ ಎಂಬ ವಿಶ್ವಾಸವಿದೆ. ಬೆಳಗ್ಗೆ ನಾನು ಕೂಡ ಈಶ್ವರಪ್ಪ ಜೊತೆ ಚರ್ಚೆ ಮಾಡಿದ್ದೇನೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಈಶ್ವರಪ್ಪಗೆ ಬೇಸರ ಆಗಿದೆ. ನಾಳೆ ಮೋದಿ ಕಾರ್ಯಕ್ರಮಕ್ಕೆ ಬರುತ್ತಾರೆಂಬ ವಿಶ್ವಾಸವಿದೆ ಎಂದರು.
ಈಶ್ವರಪ್ಪ ಸಂರ್ಪಕದಲ್ಲಿ ಕೇಂದ್ರ ನಾಯಕರು
ಈಶ್ವರಪ್ಪ ನಮ್ಮ ನಾಯಕರು, ಅವರು ಬಿಜೆಪಿಯಲ್ಲೇ ಇರುತ್ತಾರೆ ಎಂದು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಹೇಳಿದ್ದಾರೆ. ಕ್ಷೇತ್ರದಲ್ಲಿ ಟಿವಿ9 ಜೊತೆ ಮಾತನಾಡಿದ ರಾಘವೇಂದ್ರ, ಈಗಾಗಲೇ ಕೆ.ಎಸ್.ಈಶ್ವರಪ್ಪ ಮನವೊಲಿಸುವ ಕೆಲಸ ಆಗುತ್ತಿದೆ. ಕೇಂದ್ರ, ರಾಜ್ಯ ನಾಯಕರು ಈಶ್ವರಪ್ಪ ಸಂಪರ್ಕದಲ್ಲಿದ್ದಾರೆ. ನಾಳೆ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುವ ವಿಶ್ವಾಸ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Sun, 17 March 24