ಶಿವಮೊಗ್ಗ: ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬಂದು ಅತ್ಯಂತ ಸುಂದರ ರೂಪ ತಾಳುತ್ತವೆ. ಮಲೆನಾಡು ಈ ಸಮಯದಲ್ಲಿ ಮಳೆನಾಡಾಗಿ ಮಾರ್ಪಡುತ್ತದೆ. ಶಿವಮೊಗ್ಗ (Shivamogga Rain), ಚಿಕ್ಕಮಗಳೂರು (Chikmagalur Rain), ಉತ್ತರ ಕನ್ನಡ (Uttara Kannada Rain), ಕೊಡಗು (Kodagu Rains) ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೋಡಿದಲ್ಲೆಲ್ಲ ಸಣ್ಣಪುಟ್ಟ ಜಲಪಾತಗಳು ಕಾಣುತ್ತವೆ. ಕರ್ನಾಟಕದ ಜೋಗ ಜಲಪಾತದ (Jog Falls) ವಿಡಿಯೋ ಇಂಟರ್ನೆಟ್ನಲ್ಲಿ ಎಲ್ಲರ ಮನ ಗೆಲ್ಲುತ್ತಿದೆ. ಶಿವಮೊಗ್ಗದ ಜೋಗ ಜಲಪಾತವು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಜೋಗ ಭೋರ್ಗರೆಯುತ್ತದೆ.
ಜೋಗ ಜಲಪಾತದ ವಿಡಿಯೋವನ್ನು ನಾರ್ವೆಯ ಮಾಜಿ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. “ಇದು ನಯಾಗರಾ ಜಲಪಾತವಲ್ಲ… ಇದು ಭಾರತದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ” ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ಜೋಗ ಜಲಪಾತದ ಅದ್ಭುತವಾದ ಫೋಟೋ ಮತ್ತು ವೀಡಿಯೊಗಳನ್ನು ಅನೇಕ ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಟ್ವಿಟರ್‌ನಲ್ಲಿ ಸುಮಾರು 1.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಸಾವಿರಾರು ಜನ ಲೈಕ್ ಮಾಡಿದ್ದಾರೆ. ನೂರಾರು ಬಳಕೆದಾರರು ಈ ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.
Published On - 3:56 pm, Wed, 13 July 22