
ಶಿವಮೊಗ್ಗ, ಜನವರಿ 27: ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುನ್ನ ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 10,800 ಶಿಕ್ಷಕರ (Teacher recruitment) ನೇಮಕಾತಿ ಮಾಡುವ ಚಿಂತನೆ ನಡೆಸಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸೋಮವಾರ ತಿಳಿಸಿದ್ದಾರೆ.
ಶಿಕ್ಷಕರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ 14,499 ಪೂರ್ಣಾವಧಿ ಶಿಕ್ಷಕರನ್ನು ನೇಮಕ ಮಾಡಿದ್ದು, ಮೊದಲ ಬಾರಿಗೆ 51,000 ಅತಿಥಿ ಶಿಕ್ಷಕರನ್ನು ಸಹ ನೇಮಕ ಮಾಡಿದೆ ಎಂದು ಅವರು ಹೇಳಿದರು. ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮಧು ಬಂಗಾರಪ್ಪ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ 5,000 ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳು ಹಾಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು. ಈ ಯೋಜನೆಗಳಿಗೆ ಸರ್ಕಾರವು 160 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗೂಡವಿ ಪಕ್ಷಿಧಾಮವನ್ನು ‘ಒನ್ ಡಿಸ್ಟ್ರಿಕ್ಟ್, ಒನ್ ಡೆಸ್ಟಿನೇಷನ್’ ಯೋಜನೆಯಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು. ಜೊತೆಗೆ, ಶ್ರೀ ಚಂದ್ರಗುಟ್ಟಿ ರೇಣುಕಾಂಬಾದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಅನುಮೋದನೆ ನೀಡಿದ್ದು , ಯಾತ್ರಾಕೇಂದ್ರದ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 am, Tue, 27 January 26