ಶಿವಮೊಗ್ಗ: ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಇಂದಿನಿಂದ ಪಾದಯಾತ್ರೆ ಆರಂಭವಾಗಿದೆ. ಗೃಹಸಚಿವರ ಸ್ವಗ್ರಾಮ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪದಿಂದ ಶಿವಮೊಗ್ಗದವರೆಗೆ ಐದು ದಿನಗಳ ವರೆಗೆ ಪಾದಯಾತ್ರೆ ನಡೆಯಲಿದೆ.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ನಿಭಾಯಿಸುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಹೀಗಾಗಿ ಆರಗ ಜ್ಞಾನೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗೃಹ ಸಚಿವ ಆರಗಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಅಧಿಕಾರಿಗಳು ಮತ್ತು ಬಿಜೆಪಿ ರಾಜಕಾರಣಿಗಳು ಶಾಮೀಲಾಗಿದ್ದಾರೆ. ದಿವ್ಯಾ ಹಾಗರಗಿ ಮನೆಗೆ ಗೃಹ ಸಚಿವರು ಭೇಟಿ ನೀಡಿದ್ದಾರೆ. ಈ ನಡುವೆ ದಿವ್ಯಾ ತೀರ್ಥಹಳ್ಳಿಗೆ ಬಂದು ಹೋಗಿದ್ದಾರೆ. ತೀರ್ಥಹಳ್ಳಿ ಸಚಿವರ ಹಿಂಬಾಲಕರು ಈ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿ ಆಗಿರುವ ಸಂಶಯವಿದೆ. ಈಗಾಗಲೇ ತೀರ್ಥಹಳ್ಳಿಯಲ್ಲಿ ಈ ಸುದ್ದಿ ವೈರಲ್ ಆಗಿದೆ. ಹಣ ಆಸ್ತಿ ಪಾಸ್ತಿ ಇಲ್ಲದ ಸಚಿವರ ಹಿಂಬಾಲಕನು ಒಂದೂವರೆ ಕೋಟಿ ಮನೆ ಕಟ್ಟುತ್ತಿದ್ದಾನೆ. ಇನ್ನೂ ಸಚಿವರಾದ ಮೇಲೆ ಬಡವರಿದ್ದ ಅವರು ಈಗ ಶ್ರೀಮಂತರಾಗಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ಕೋಟಿ ಕೋಟಿ ಲೂಟಿ ತೀರ್ಥಹಳ್ಳಿ ನಡೆಯುತ್ತಿದೆ. ಗೃಹ ಸಚಿವರಾಗಿ ಈ ಎಲ್ಲ ಅಕ್ರಮ ತಡೆಯಲು ಗೃಹ ಸಚಿವರು ವಿಫಲರಾಗಿದ್ದಾರೆ. ಐಎಸ್ಐ ಅಕ್ರಮ ನೇಮಕಾತಿ ತನಿಖೆ ನಡೆಯುತ್ತಿದೆ. ನ್ಯಾಯಯುತ ತನಿಖೆ ಆಗಬೇಕು ಅಂದ್ರೆ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಸಚಿವರ ಮನೆ ಮುಂದೆ ತಮಟೆ ಭಾರಿಸುತ್ತ ನಿಂತ ಕಾರ್ಯಕರ್ತರಿಗೆ ಕಿಮ್ಮನೆ ರತ್ನಾಕರ್ ತರಾಟೆ
ತೀರ್ಥಹಳ್ಳಿ ತಾಲೂಕಿನ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಗ್ರಾಮ ಗುಡ್ಡೆಕೊಪ್ಪ ಗ್ರಾಮದಿಂದ ಪಾದಯಾತ್ರೆ ಶುರುವಾಗಿದ್ದು ಸಚಿವರ ಮನೆ ಮುಂದೆ ಪಾದಯಾತ್ರೆ ಸಾಗುವ ವೇಳೆ ಕಾರ್ಯಕರ್ತರು ಡ್ರಮ್ ಭಾರಿಸುತ್ತ ನಿಂತಿದ್ದು ಇದರಿಂದ ಪಾದಯಾತ್ರೆ ಬಿಟ್ಟು ಡ್ರಮ್ ಭಾರಿಸುತ್ತಿದ್ದವರ ಬಳಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ದೌಡಾಯಿಸಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವರ ಮನೆಮುಂದೆ ಡ್ರಮ್ ಭಾರಿಸಿದ್ದಕ್ಕೆ ಆಕ್ರೋಶಗೊಂಡ ರತ್ನಾಕರ್, ಈ ರೀತಿ ಆಗಿ ನಡೆದುಕೊಂಡರೆ ಪಾದಯಾತ್ರೆ ಮೊಟಕುಗೊಳಿಸುವುದಾಗಿ ಎಚ್ಚರಿಕೆ ಕೊಟ್ಟರು.
Published On - 12:15 pm, Fri, 6 May 22