ಶಿವಮೊಗ್ಗ, ಡಿ.17: ನೂರಾರು ಕೋಟಿ ವೆಚ್ಚ ಮಾಡಿ ನೂತನ ಏರ್ಪೋರ್ಟ್ ಶಿವಮೊಗ್ಗ(Shivamogga) ತಾಲೂಕಿನ ಸೊಗಾನೆ ಗ್ರಾಮದಲ್ಲಿ ನಿರ್ಮಾಣ ಆಗಿದೆ. ಈ ನಡುವೆ ವಿಮಾನ ನಿಲ್ದಾಣ(Airport) ಅಕ್ಕ-ಪಕ್ಕದಲ್ಲಿರುವ ಜಮೀನುಗಳಿಗೆ ಸದ್ಯ ಚಿನ್ನದ ಬೆಲೆ ಬಂದಿದ್ದು, ಒಂದು ಎಕರೆಗೆ ಬರೊಬ್ಬರಿ ಕೋಟಿ ಕೋಟಿ ಬೆಲೆ ಬಂದಿದೆ. ಹೀಗಾಗಿ ಎಲ್ಲಿ ಸರಕಾರಿ, ಬಗರ್ ಹುಕಂ ಜಮೀನು ಅಥವಾ ವ್ಯಾಜ್ಯ ಇರುವ ಖಾಲಿ ಜಮೀನು ಕಣ್ಣಿಗೆ ಬಿದ್ದರೇ ಸಾಕು, ಅಲ್ಲಿ ಭೂಗಳ್ಳರ ಮತ್ತು ಪ್ರಭಾವಿಗಳ ಆಟ ಶುರುವಾಗಿ ಬಿಡುತ್ತಿದೆ. ಸದ್ಯ ಏರ್ಪೋರ್ಟ್ ಪಕ್ಕದಲ್ಲೇ ಇರುವ ಕೊರ್ಲಹಳ್ಳಿ (ಕಾಚಿನಕಟ್ಟೆ) ಗ್ರಾಮದ ಸರ್ವೆ 31 ರ ಅಕ್ಕಪಕ್ಕದಲ್ಲಿರುವ ಮೂರು ಎಕರೆ ಜಮೀನು ಸದ್ಯ ಗುಳಂ ಆಗಿದೆ. ಒಬ್ಬರದ್ದೂ ಒಂದೂವರೆ ಎಕರೆ ಹೋದ್ರೆ, ಇನ್ನೂ ಮೂವರದ್ದು ಸೇರಿ ಒಂದುವರೆ ಎಕರೆ ಜಮೀನು ಕೈ ತಪ್ಪಿದೆ.
ಈ ಮೂರು ಎಕರೆ ಜಮೀನನ ನಕಲಿ ದಾಖಲೆ ಸೃಷ್ಟಿ ಮಾಡಿ, ಕೇವಲ ಆರೇ ತಿಂಗಳಲ್ಲಿ ಅರುಣ ಕುಮಾರ್ ಎನ್ನುವ ವ್ಯಕ್ತಿಯ ಹೆಸರಿಗೆ ಮೂರು ಎಕರೆ ಜಮೀನು ಆಗಿದೆಯಂತೆ. ಇಷ್ಟು ವರ್ಷಗಳ ಕಾಲ ಪೋಡಿ ಮಾಡಲು ಗ್ರಾಮಸ್ಥರು ಪರದಾಡುತ್ತಿದ್ದರೆ, ಇತ್ತ ಕೇವಲ ಆರೇ ತಿಂಗಳಲ್ಲಿ ಪೋಡಿ ಮತ್ತು ಖಾತೆ ಮಾಡಲಾಗಿದ್ದು, ಇದರಲ್ಲಿ ಕಂದಾಯ ಇಲಾಖೆಯ ಕೈವಾಡವು ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೂರು ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿದ ಹಿನ್ನಲೆ ಜಮೀನು ಈಗ ಭೂಗಳ್ಳರ ಪಾಲಾಗಿದೆ ಎನ್ನುವುದು ಭೂಮಿ ಕಳೆದುಕೊಂಡಿರುವ ಜಮೀನಿನ ಸಂತ್ರಸ್ತರ ಆರೊಪವಾಗಿದೆ. ಇದರ ಹಿಂದೆ ಕೆಲ ಪ್ರಭಾವಿ ಕಾಂಗ್ರೆಸ್ ಮುಖಂಡರು ಶಾಮೀಲು ಆಗಿದ್ದಾರೆ. ಈ ಹಿನ್ನಲೆಯಲ್ಲಿ ಏರ್ ಪೋರ್ಟ್ ಅಕ್ಕಪಕ್ಕದ ಜಮೀನು ಭೂಗಳ್ಳರ ಪಾಲಾಗುತ್ತಿರುವುದಕ್ಕೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಅರ್ಜಿ ಸಲ್ಲಿಸದೆಯೂ, ಅಕ್ರಮವಾಗಿ ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಂಡ ಭೂಗಳ್ಳರು ಬಯಲಿಗೆ ಬಿದ್ದರು!
ಮೂರು ನಾಲ್ಕು ದಶಕಗಳಿಂದ ಉಳುಮೆ ಮಾಡುತ್ತಿದ್ದ ಜಮೀನಿನಲ್ಲಿ ಮೂರು ಎಕರೆ ಜಮೀನು ಈಗ ಮತ್ತೊಬ್ಬರ ಪಾಲಾಗಿದೆ. ಮೃತ ಗೀತಾಮಣಿ ಎನ್ನುವ ಮಕ್ಕಳಿಂದ ಅರುಣಕುಮಾರ್ ಅವರು ಭೂಮಿ ಖರೀದಿ ಮಾಡಿರುವ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಅಸಲಿಗೆ ಗೀತಾಮಣಿ ಜಮೀನು ಅಲ್ಲಿ ಇಲ್ಲವೇ ಇಲ್ಲ ಎನ್ನುವುದು ಅಕ್ಕಪಕ್ಕದ ಜಮೀನು ಮಾಲೀಕರು ಆರೋಪವಾಗಿದೆ. ತಮ್ಮಯ್ಯ, ಚಂದ್ರಪ್ಪ , ನರಸಿಂಹಯ್ಯ, ಅಪ್ಪು ನಾಯ್ಕ ರೈತರಿಗೆ ಸೇರಿದ ಮೂರು ಎಕೆರೆ ಜಮೀನು ಇದಾಗಿದ್ದು, ಇದೀಗ ಅದರಲ್ಲಿ ಮೂರು ಎಕೆರೆ ಅರುಣಕುಮಾರ್ ಎನ್ನುವ ವ್ಯಕ್ತಿಗೆ ವರ್ಗಾವಣೆ ಆಗಿದೆಯಂತೆ.
ಈ ಜಮೀನು ವಿಚಾರವು ಈಗಾಗಲೇ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಇದೇ ವಿವಾದಿತ ಜಮೀನು ವಿಚಾರವಾಗಿ ನರಸಿಂಹಯ್ಯ, ನಿರಂಜನ ಕುಮಾರ್ ಮತ್ತು ಚನ್ನಯ್ಯ ಮಗ ನಾಗರಾಜ್ ಮೇಲೆ ಅರುಣುಕುಮಾರ್ ಮತ್ತು ಆತನ ಬೆಂಬಲಿಗರ ನಡುವೆ ಹೊಡೆದಾಟ ಆಗಿದೆ. ಹಲ್ಲೆಗೊಳಗಾದ ಎರಡು ಗುಂಪುಗಳಿಂದ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ನಾಗರಾಜ್, ನಿರಂಜನ್ ಕುಮಾರ್ ಮೇಲೆ ಐದಾರು ಜನರ ಗುಂಪು ತುಂಗಾ ನಗರ ಪೊಲೀಸರ ಸಮ್ಮುಖದಲ್ಲಿ ಹಲ್ಲೆ ಮಾಡಿದೆ. ಇವರು ಅರುಣಕುಮಾರ್ ಬೆಂಬಲಿಗರೆಂದು ಹಲ್ಲೆಗೊಳಗಾದ ನಾಗರಾಜ್ ಆರೋಪಿಸಿದ್ದಾರೆ.
ಈ ನಡುವೆ ಗ್ರಾಮಸ್ಥರು ಮತ್ತು ಭೂಮಿ ಕಳೆದುಕೊಂಡಿರುವ ಜಮೀನಿನ ಮಾಲೀಕರು ಈಗ ಬೇಸರ ಹೊರಹಾಕಿದ್ದಾರೆ. ಈ ರೀತಿ ಕಂಡ ಕಂಡವರ ಭೂಮಿಯು ಮತ್ತೊಬ್ಬರ ಪಾಲಾಗುತ್ತಿದೆ. ಆರೇಳು ದಶಕಗಳಿಂದ ಉಳಿಮೆ ಮಾಡಿದವರನ್ನು ಬಿಟ್ಟು, ಈಗ ಹೊಸ ಹೊಸ ವ್ಯಕ್ತಿಗಳು ಅವರ ಜಮೀನು ತಮ್ಮದು ಎಂದು ಕಬಳಿಕೆ ಮಾಡುತ್ತಿದ್ದಾರೆ. ಇದಕ್ಕೆ ಸ್ಥಳೀಯ ಗ್ರಾ.ಪಂಚಾಯತಿ ಪಿಡಿಓ ಮತ್ತು ಸಿಬ್ಬಂದಿಗಳು ಸಾಥ್ ಕೊಟ್ಟಿದ್ದಾರಂತೆ. ಸದ್ಯ ಈ ಭೂಮಿ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಅರುಣಕುಮಾರ್ ಹಲ್ಲೆ ಮಾಡಿದ್ದಾರೆ ಎನ್ನುವುದು ಹಲ್ಲೆಗೊಳಗಾದವರ ಆರೋಪವಾಗಿದೆ. ಮಲೆನಾಡಿನಲ್ಲಿ ಸರಕಾರಿ ಮತ್ತು ಅರಣ್ಯ ಭೂಮಿಯು ಒತ್ತುವರಿ ಒಂದಡೆ ನಿರಂತರವಾಗಿ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಈಗ ಏರ್ ಪೋರ್ಟ್ ಅಕ್ಕಪಕ್ಕದಲ್ಲಿ ಇರುವ ಜಮೀನು ಕಬಳಿಕೆ ಶುರುವಾಗಿದೆ. ಯಾರದೋ ಭೂಮಿಯು ಪ್ರಭಾವಿಗಳ ಪಾಲಾಗುತ್ತಿದೆ. ಸದ್ಯ ಏರ್ ಪೋರ್ಟ್ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ರೈತರು ಈ ಭೂಗಳ್ಳರ ಹಾವಳಿಗೆ ಕಂಗಾಲಾಗಿ ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Sun, 17 December 23