ಶಿವಮೊಗ್ಗದ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಯ ಕೃತ್ಯವೊಂದು ಜರುಗಿದೆ. ಮಗುವನ್ನು ಹೆತ್ತ ತಾಯಿಯೊಬ್ಬಳು (mother) ತನ್ನ ನವಜಾತ ಶಿಶುವನ್ನು ಬೀದಿಗೆ ಎಸೆದಿದ್ದಾಳೆ. ಮುಂದೆ ಕೆಲವೇ ಕ್ಷಣಗಳಲ್ಲಿ ಆ ಮಗು ಬೀದಿ ನಾಯಿ (dog) ದಾಳಿಗೆ ಬಲಿಯಾಗಿದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ (Shivamogga meggan hospital) ಹೆರಿಗೆ ವಾರ್ಡ್ ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹೆಣ್ಣು ಶಿಶುವನ್ನು ಹೆತ್ತ ತಾಯಿಯು ಬಳಿಕ ಆ ಮುಗ್ಧ ಮಗುವನ್ನು ಹೆರಿಗೆ ವಾರ್ಡ್ ಆವರಣದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಆ ನವಜಾತ ಶಿಶುವನ್ನು ಆಸ್ಪತ್ರೆಯ ಆವರಣದಲ್ಲಿದ್ದ ಬೀದಿ ನಾಯಿ ಕಚ್ಚಿ ಕಚ್ಚಿ ಬಲಿ ಪಡೆದಿದೆ. ಏನಿದು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ನಡೆದ ಅಮಾನವೀಯ ಕೃತ್ಯ? ಆ ಕುರಿತು ಒಂದು ವರದಿ ಇಲ್ಲಿದೆ.
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಒಂದಲ್ಲ ಒಂದು ಕರ್ಮಕಾಂಡಗಳು ನಡೆಯುತ್ತಿರುತ್ತವೆ. ವೈದ್ಯರಿಗೆ ಮತ್ತು ಸಿಬ್ಬಂದಿಗೆ ಹಣ ಕೊಟ್ಟರೆ ಮಾತ್ರ ಹೆರಿಗೆ ವಾರ್ಡ್ ನಲ್ಲಿ ಚಿಕಿತ್ಸೆ ಎನ್ನುವುದು ಸರ್ವೇಸಾಮಾನ್ಯವಾಗಿದೆ. ಈ ಹೆರಿಗೆ ವಾರ್ಡ್ ಅಂದ್ರೆ ಕಾಸು ಮಾಡುವ ಆಯಕಟ್ಟಿನ ಸ್ಥಳವಾಗಿ ಬಿಟ್ಟಿದೆ. ಸದ್ಯ ಇದೇ ಹೆರಿಗೆ ವಾರ್ಡ್ ನಲ್ಲಿ ಮಹಿಳೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾಳೆ. ಬಳಿಕ ಆ ಹೆಣ್ಣು ಮಗುವನ್ನು ಒಂದು ಕವರ್ ನಲ್ಲಿ ಹಾಕಿ ಹೆರಿಗೆ ವಾರ್ಡ್ ನ ಆವರಣದಲ್ಲಿ ಬಿಟ್ಟುಹೋಗಿದ್ದಾಳೆ.
ಈ ಕವರ್ ನಲ್ಲಿರುವ ಮಗುವನ್ನು ಬೀದಿ ನಾಯಿಯು ಎಳೆದುಕೊಂಡು ಹೋಗಿದೆ. ಮಗುವಿನ ಮೇಲೆ ದಾಳಿ ಮಾಡಿದೆ. ಈ ನಡುವೆ ಮಗುವಿನ ಮೇಲಿನ ದಾಳಿ ನೋಡಿದ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ಬಚಾವ್ ಮಾಡಲು ಯತ್ನಿಸಿದ್ದಾರೆ. ನಾಯಿಯನ್ನು ಓಡಿಸಿ ಮಗುವಿನ ಹತ್ತಿರ ಹೋಗಿ ನೋಡಿದಾಗ ಮಗುವಿನ ಪ್ರಾಣ ಅದಾಗಲೇ ಹಾರಿಹೋಗಿತ್ತು.
ನವಜಾತ ಹೆಣ್ಣು ಶಿಶುವಿನ ಮೇಲೆ ನಾಯಿ ದಾಳಿ ಮಾಡಿದ್ದರಿಂದ ಆ ಮಗುವಿಗೆ ಮೈ ತುಂಬಾ ಗಾಯಗಳಾಗಿದ್ದವು. ಸದ್ಯ ಈ ಘಟನೆಯಿಂದ ಹೆರಿಗೆ ವಾರ್ಡ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಂದಡೆ ಹೆತ್ತ ತಾಯಿಯೇ ತನ್ನ ಕರುಳು ಬಳ್ಳಿಯನ್ನು ಬೀದಿಯಲ್ಲಿ ಬಿಸಾಡಿ ಹೋಗಿದ್ದಾಳೆ. ಮತ್ತೊಂದೆಡೆ ಆ ಮಗು ಬೀದಿ ನಾಯಿಗೆ ಬಲಿಯಾಗಿದೆ.
ಈ ಎರಡು ಘಟನೆಯಿಂದ ಹೆರಿಗೆ ವಾರ್ಡ್ ಮತ್ತು ಆಸ್ಪತ್ರೆಯಲ್ಲಿರುವ ಮಹಿಳೆಯರು ಮತ್ತು ಸ್ಥಳೀಯರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಮಗು ಆಗಿಲ್ಲ ಅಂತಾ ಮೊನ್ನೆ ತಾನೆ ಶಿವಮೊಗ್ಗದಲ್ಲಿ ಮಹಿಳೆಯು ನೇಣಿಗೆ ಶರಣಾಗಿದ್ದಳು. ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು. ಮಗು ಬೇಕೆನ್ನುವ ಹಂಬಲದಲ್ಲಿದ್ದ ತಾಯಿಗೆ ನಿರಾಸೆ ಆಗಿತ್ತು. ಮಗುವಾಗಿಲ್ಲ ಅಂತಾ ತನ್ನ ಜೀವವನ್ನೇ ಕಳೆದುಕೊಂಡಿದ್ದಳು. ವಿಚಿತ್ರವೆಂದರೆ ತಾಜಾ ಪ್ರಕರಣದಲ್ಲಿ ಹೆತ್ತ ತಾಯಿಯೇ ಹುಟ್ಟಿದ ಮಗುವನ್ನು ಬೀದಿಯಲ್ಲಿ ಬಿಟ್ಟು ಅದರ ಸಾವಿಗೆ ಕಾರಣವಾಗಿದ್ದಾಳೆ ಎಂದು ಹೆರಿಗೆ ವಾರ್ಡ್ ರೋಗಿಯ ಸಂಬಂಧಿಕರಾದ ಮಂಜುಳಾ ಕಮಲಮ್ಮ ಸಂಕಟಪಟ್ಟಿದ್ದಾರೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಆರಂಭದಿಂದಲೂ ಸರಿಯಾದ ವ್ಯವಸ್ಥೆಗಳಿಲ್ಲ. ಸದ್ಯ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಯಾರು ಎನ್ನುವುದು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಸದ್ಯ ಈ ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಮಗುವಿನ ಮೃತದೇಹವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮಗುವಿನ ಅಂತ್ಯಕ್ರಿಯೆ ನಡೆಯಬೇಕಿದೆ. ಆದ್ರೆ ಈ ವರೆಗೂ ಮೃತ ಪಟ್ಟಿರುವ ಮಗುವಿನ ತಂದೆ ತಾಯಿ ಯಾರು ಎನ್ನುವುದೇ ಗೊತ್ತಾಗಿಲ್ಲ.
ಹೀಗಾಗಿ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಈಗ ದೊಡ್ಡ ತಲೆ ಬಿಸಿ ಶುರುವಾಗಿದೆ. ಸದ್ಯ ಮೆಗ್ಗಾನ್ ಹರಿಗೆ ವಾರ್ಡ್ ನಲ್ಲಿರುವ ವೈದ್ಯರು ಮತ್ತು ನರ್ಸ್ ಮತ್ತು ಬ್ರದರ್ಸ್ ಹಾಗೂ ಸಿಬ್ಬಂದಿಯ ವಿಚಾರಣೆ ಶುರುವಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ನಿತ್ಯ ಅನೇಕ ಗರ್ಭಿಣಿಯರು ಚಿಕಿತ್ಸೆಗೆಂದು ದಾಖಲು ಆಗುತ್ತಾರೆ.
ಬಡವರಿಗೆ ಉಚಿತವಾಗಿ ಅತ್ಯುತ್ತಮ ಹೆರಿಗೆ ಸೌಲಭ್ಯಗಳು ಜಿಲ್ಲಾಸ್ಪತ್ರೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಬಡವರು ಹೆರಿಗೆಗೆಂದು ಇದೇ ಆಸ್ಪತ್ರೆಗೆ ದಾಖಲು ಆಗುತ್ತಾರೆ. ಎಲ್ಲ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ ಎನ್ನುವ ಉದ್ದೇಶದಿಂದ ಬಡವರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ರೆ ಹೀಗೆ ಬಂದಂತಹ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉತ್ತಮ ಚಿಕಿತ್ಸೆ ಸೌಲಭ್ಯ ಸುಲಭವಾಗಿ ಸಿಗುವುದಿಲ್ಲ.
ಕೈ ಬಿಸಿ ಮಾಡಿದ್ರೆ ಮಾತ್ರ ಉತ್ತಮ ಚಿಕಿತ್ಸೆ. ಹೆರಿಗೆ ವಾರ್ಡ್ ನಲ್ಲಿ ಮಹಿಳೆಯೊಬ್ಬಳ ಹೆರಿಗೆ ಆಗಿದೆ. ಅವಳು ಮಗುವನ್ನು ಬೀದಿಯಲ್ಲಿ ಎಸೆದು ಎಸ್ಕೇಪ್ ಆದ್ರೂ ಸಿಬ್ಬಂದಿ ಮತ್ತು ಸೆಕ್ಯುರಿಟಿ ಸಿಬ್ಬಂದಿಗಳಿಗೆ ಗೊತ್ತೇ ಆಗಿಲ್ಲ. ಮಗುವಿನ ಮೇಲೆ ನಡೆದ ದಾಳಿ ನಡೆದು ಸ್ಥಳೀಯರು ನೋಡಿದ ಬಳಿಕವಷ್ಟೇ ಈ ಪ್ರಕರಣವು ಬೆಳಕಿಗೆ ಬಂದಿದೆ. ಇಂತಹ ಘಟನೆಗೆ ಚಿಕಿತ್ಸೆಗೆಂದು ಹೆರಿಗೆ ವಾರ್ಡ್ ಗೆ ಬಂದಂತ ರೋಗಿಗಳ ಸಂಬಂಧಿಕರು ತಮ್ಮ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ:
ಹೆಣ್ಣು ನವಜಾತ ಶಿಶು ಸಾವು ಮಾತ್ರ ಎಲ್ಲರಿಗೂ ಬೇಸರ ತಂದಿದೆ. ಒಂದಡೆ ಹುಟ್ಟಿದ ಮಗುವಿಗೆ ಹೆತ್ತವಳೇ ಅನ್ಯಾಯ ಮಾಡಿದ್ದರೆ, ಅತ್ತ ಬೀದಿ ನಾಯಿಯ ಆ ಮಗುವಿನ ಮೇಲೆ ದಾಳಿ ಮಾಡಿ ಅದರ ಜೀವ ಬಲಿ ಪಡೆದಿದೆ. ಹೆತ್ತ ತಾಯಿ ಮಾಡಿದ ತಪ್ಪಿಗೆ ಇನ್ನೂ ಪ್ರಪಂಚವೇ ನೋಡದ ಮಗು ಹುಟ್ಟಿದ ಕೆಲವೇ ಘಂಟೆಯಲ್ಲಿ ಮೃತಪಟ್ಟಿದ್ದು ಮಾತ್ರ ನೋವಿನ ಸಂಗತಿ.
ವರದಿ: ಬಸವರಾಜ್ ಯರಗಣವಿ ಟವಿ 9 ಶಿವಮೊಗ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ