ಶಿವಮೊಗ್ಗ: ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ; ಗುಡ್ಡ ಕುಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

| Updated By: preethi shettigar

Updated on: Aug 21, 2021 | 10:45 AM

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸಕ್ರಮ ಗಣಿಗಾರಿಕೆಯ ಅನುಮತಿ ಪರಿಷ್ಕೃತ ಕೂಡಾ ಮಾಡಿಲ್ಲ. ಆದರೂ ಕದ್ದು ಮುಚ್ಚಿ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ರಾತ್ರಿ ಸಮಯದಲ್ಲಿ ಬಂಡೆ ಸ್ಫೋಟ ಮಾಡಿ ಬೆಳಗ್ಗೆ ಕಲ್ಲು ಗಣಿಗಾರಿಕೆಯನ್ನು ಅಕ್ರಮ ದಂಧೆಕೋರರು ಸಾಗಿಸುತ್ತಿದ್ದಾರೆ.

ಶಿವಮೊಗ್ಗ: ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ; ಗುಡ್ಡ ಕುಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ಅಕ್ರಮ ಗಣಿಗಾರಿಕೆ
Follow us on

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಅಪ್ಪಟ ಮಲೆನಾಡಿನ ಪ್ರದೇಶವಾಗಿದೆ. ಈ ನಡುವೆ ಸಕ್ರಮ ಹೆಸರಿನಲ್ಲಿ ಅಕ್ರಮವಾಗಿ ನಿರಂತರ ಕಲ್ಲು ಗಣಿಗಾರಿಕೆಯು ಈ ಭಾಗದಲ್ಲಿ ನಡೆಯುತ್ತಿದೆ. ಈ ಗಣಿಗಾರಿಕೆಯಿಂದ ಮಲೆನಾಡಿನಲ್ಲಿ ದೊಡ್ಡ ದೊಡ್ಡ ಅವಾಂತರಗಳು ಎದುರಾಗುತ್ತಿವೆ. ಅದಕ್ಕೆ ಸಾಕ್ಷಿ ಈ ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿರುವುದು. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಸಹಜವಾಗಿಯೇ ಈ ಭಾಗದ ಜನರ ಅಕ್ರೋಶಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಮಲೆನಾಡಿನಲ್ಲಿ ಸುರಿದ ಮಹಾಮಳೆಗೆ ತೀರ್ಥಹಳ್ಳಿ ಭಾಗದಲ್ಲಿ ಅನೇಕ ಗುಡ್ಡಗಳು ಕುಸಿದು ಬಿದ್ದಿದ್ದವು. ಇದಕ್ಕೆ ಕಾರಣ ತೀರ್ಥಹಳ್ಳಿಯ ಕುರುವಳ್ಳಿ ಬಳಿ ದಶಕಗಳಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದೇ ಆಗಿದೆ. ಸಕ್ರಮ ಕ್ವಾರೆ ನೆಪದಲ್ಲಿ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.

ಶಿವಮೊಗ್ಗದ ಹುಣಸೋಡಿನಲ್ಲಿ ಇದೇ ಅಕ್ರಮ ಕಲ್ಲು ಗಣಿಗಾರಿಕೆಯು ದೊಡ್ಡ ಅವಾಂತರ ಸೃಷ್ಟಿ ಮಾಡಿದ್ದು, ಆರು ಜನರನ್ನು ಬಲಿ ಪಡೆದುಕೊಂಡಿತ್ತು. ಲಾರಿ ಸಮೇತ ಸ್ಪೋಟವಾಗಿದ್ದ ಈ ಘಟನೆಯ ಇನ್ನೂ ಮಾಸಿಲ್ಲ. ಹೀಗಿರುವಾಗಲೇ ತೀರ್ಥಹಳ್ಳಿಯಲ್ಲಿ ಮೇಲಿನ ಕುರುವಳ್ಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸರ್ವೇ ನಂ.75ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯು ನಡೆಯುತ್ತಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸಕ್ರಮ ಗಣಿಗಾರಿಕೆಯ ಅನುಮತಿ ಪರಿಷ್ಕೃತ ಕೂಡಾ ಮಾಡಿಲ್ಲ. ಆದರೂ ಕದ್ದು ಮುಚ್ಚಿ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯು ನಡೆಯುತ್ತಿದೆ. ರಾತ್ರಿ ಸಮಯದಲ್ಲಿ ಬಂಡೆ ಸ್ಫೋಟ ಮಾಡಿ ಬೆಳಗ್ಗೆ ಕಲ್ಲು ಗಣಿಗಾರಿಕೆಯನ್ನು ಅಕ್ರಮ ದಂಧೆಕೋರರು ಸಾಗಿಸುತ್ತಿದ್ದಾರೆ. ಹೀಗೆ ಅಕ್ರಮ ಕಲ್ಲುಗಣಿಗಾರಿಕೆಯ ಸ್ಪೋಟದಿಂದ ಸುತ್ತಮುತ್ತಲಿನ ಗುಡ್ಡಗಳು ಕುಸಿಯುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಇಲ್ಲಿಯ ಗುಡ್ಡ ಕುಸಿತವು ಸ್ಥಳೀಯರಿಗೆ ದೊಡ್ಡ ಆತಂಕ ಸೃಷ್ಟಿಸಿತ್ತು. ಹೀಗಾಗಿ ಈ ಅಕ್ರಮ ಗಣಿಗಾರಿಕೆಯ ಕುರಿತು ಸ್ಥಳೀಯರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವು ಸದ್ಯ ಗೃಹ ಸಚಿವರ ತವರು ಕ್ಷೇತ್ರವಾಗಿದೆ. ಗೃಹ ಸಚಿವರ ತವರಿನಲ್ಲಿ ಅಕ್ರಮ ಕಲ್ಲು ಗಣಿಕಾರಿಕೆಯು ಎಗ್ಗಿಲ್ಲದೇ ನಡೆಯುತ್ತಿದೆ. ಈ ಗಣಿಗಾರಿಕೆಯಲ್ಲಿ ಎಲ್ಲ ಪಕ್ಷದ ಬೆಂಬಲಿಗರು ಭಾಗಿಯಾಗಿದ್ದಾರೆ. ಹೀಗಾಗಿ ಇಲ್ಲಿ ಜನಪ್ರತಿನಿಧಿಗಳು ರಾಜಕಾರಣಿಗಳು ತುಟಿ ಬಿಚ್ಚುತ್ತಿಲ್ಲ. ಮಲೆನಾಡಿನ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಬಾರದು ಎಂದು ಈಗಾಗಲೇ ಹೈಕೋರ್ಟ್ ಕೂಡಾ ಸೂಚನೆ ನೀಡಿದೆ. ಈ ನಡುವೆ ಕೂಡಾ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯು ನಿರಂತರವಾಗಿ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರರಾದ ರಮೇಶ್ ಹೆಗ್ಡೆ ತಿಳಿಸಿದ್ದಾರೆ.

ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರಗಳು ಇಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಯಬೇಕಿರುವ ತೀರ್ಥಹಳ್ಳಿಯ ತಹಸೀಲ್ದಾರ್, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಇಲ್ಲಿಯ ವರೆಗೆ ತೆಗೆದುಕೊಂಡಿಲ್ಲ. ದಶಕಗಳಿಂದ ಎಷ್ಟೇ ಅಕ್ರಮ ಕಲ್ಲು ಗಣಿಗಾರಿಕೆ ನಡೆದರೂ, ಯಾರು ಇತ್ತ ತಿರುಗಿ ನೋಡುವುದಿಲ್ಲ. ಕೆಲವರು ಸಕ್ರಮ ಕಲ್ಲು ಗಣಿಗಾರಿಕೆ ಪಡೆದುಕೊಂಡು ಗುಡ್ಡಗಳನ್ನೇ ಅಕ್ರಮವಾಗಿ ಕುಸಿಯುವಂತೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರಾದ ರಮೇಶ್ ಹೆಗ್ಡೆ ಹೇಳಿದ್ದಾರೆ.

ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಗೃಹ ಸಚಿವರು ಕಡಿವಾಣ ಹಾಕಬೇಕಿದೆ. ಹೀಗೆ ಮಲೆನಾಡಿನ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ದೊಡ್ಡ ಆಪತ್ತುಗಳನ್ನು ಸೃಷ್ಟಿಸುತ್ತಿವೆ. ಮತ್ತೆ ದೊಡ್ಡ ಅವಾಂತರಗಳು ಆಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ವರದಿ: ಬಸವರಾಜ್ ಯರಣಗವಿ

ಇದನ್ನೂ ಓದಿ:
ಮಾಗಡಿ ತಾಲ್ಲೂಕಿನಾದ್ಯಂತ ಕಲ್ಲು ಗಣಿಗಾರಿಕೆಯದ್ದೇ ಸದ್ದು; ಮತ್ತೊಂದು ಬೆಟ್ಟ ಕರಗುವ ಆತಂಕ

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ; 11 ಕಲ್ಲು ಗಣಿ ಗುತ್ತಿಗೆಗಳ ರದ್ದು, 11 ಹೊಸ ಚೆಕ್‌ಪೋಸ್ಟ್ ಸ್ಥಾಪನೆ