ರಾಮನಗರ: ಅರೆ ಮಲೆನಾಡು ಎಂದೇ ಖ್ಯಾತಿಯಾದ ರಾಮನಗರ ಜಿಲ್ಲೆಯ ಮಾಗಡಿಯ ಬೆಟ್ಟ-ಗುಡ್ಡಗಳು ಗಣಿಗಾರಿಕೆಯಿಂದಾಗಿ ಒಂದೊಂದೇ ಕರಗತೊಡಗಿವೆ. ಇದೀಗ ಜೇನುಕಲ್ಲು ಬೆಟ್ಟವೂ ಈ ಹಾದಿ ಹಿಡಿಯುವ ಕಾಲ ಸನ್ನಿಹಿತವಾಗಿದ್ದು, ಮಾಗಡಿ ಪಟ್ಟಣದಿಂದ ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿರುವ ಈ ಬೆಟ್ಟ ಕೂಡ ವಿವಾದದ ಕೇಂದ್ರವಾಗಿದೆ. ಇಲ್ಲಿ ಗುಡ್ಡ ಅಗೆದು ಕ್ರಷರ್ ಆರಂಭಕ್ಕೆ ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಇನ್ನಿತರ ಇಲಾಖೆಗಳಿಂದ ಕೂಡ ಇದಕ್ಕೆ ಪರವಾನಗಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದರಿಂದಾಗಿ ಇಲ್ಲಿನ ಜನಜೀವನದ ಜತೆಗೆ ಜೀವ ವೈವಿಧ್ಯತೆಗೂ ಧಕ್ಕೆ ಆಗುತ್ತಿದೆ. ಇದು ಸಹಜವಾಗಿಯೇ ಈ ಭಾಗದ ಜನರ ವಿರೋಧಕ್ಕೆ ಕಾರಣವಾಗಿದೆ.
ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯ ಚನ್ನಮ್ಮನ ಪಾಳ್ಯದ ಮಹದೇಶ್ವರ ಬೆಟ್ಟದಿಂದ ಚೀಲೂರುವರೆಗೆ ಸುಮಾರು 200 ಎಕರೆ ಪ್ರದೇಶದಲ್ಲಿ ಜೇನುಕಲ್ಲು ಬೆಟ್ಟವಿದೆ. 1944ರಲ್ಲಿ ಮೈಸೂರು ಸಂಸ್ಥಾನವು ಇದನ್ನು ಹುಲ್ಲುಬಂಧಿ ಕಾವಲು ಎಂದು ಘೋಷಣೆ ಮಾಡಿದೆ. ಸುತ್ತಮುತ್ತ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿವೆ.
ದುಬ್ಬಗೊಟ್ಟಿಗೆ ಗ್ರಾಮದ ಸರ್ವೆ ಸಂಖ್ಯೆಗೆ ಒಳಪಡುವ ಈ ಪ್ರದೇಶವನ್ನು ಸದ್ಯ ಗೋಮಾಳ ಎಂದೇ ನಮೂದಿಸಲಾಗಿದೆ. ದುಬ್ಬಗೊಟ್ಟಿಗೆ, ಕಲ್ಲಯ್ಯನ ಪಾಳ್ಯ, ಜೋಗಿ ಪಾಳ್ಯ, ಮದಲಾರಿ ಪಾಳ್ಯ, ತಗ್ಗೀಕುಪ್ಪೆ, ಕುರುಬರ ಪಾಳ್ಯ, ಮೋಟೆಗೌಡನ ಪಾಳ್ಯ, ಹೂಜಗಲ್ ಹೀಗೆ ಸುತ್ತಲಿನ ಹತ್ತಾರು ಗ್ರಾಮಗಳಿಗೆ ಈ ಗುಡ್ಡ ನೆರಳಂತೆ ನಿಂತಿದೆ.
ಜೇನುಕಲ್ಲು ಬೆಟ್ಟದಲ್ಲಿನ ಬಸವಣ್ಣ ದೇಗುಲ ಜೇನುಕಲ್ಲು ಬೆಟ್ಟದಲ್ಲಿ ಬಸವಣ್ಣನ ದೇಗುಲ ಇದೆ. ಗುಡ್ಡಕ್ಕೆ ಹೊಂದಿಕೊಂಡಂತೆ ಕೆರೆಯೂ ಇದ್ದು, ನೂರಾರು ರೈತರು ಇದನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಗೋಮಾಳದಲ್ಲಿ ಸುತ್ತಲಿನ ಗ್ರಾಮಗಳ ಜಾನುವಾರುಗಳು ಹಸಿವು ನೀಗಿಸಿಕೊಳ್ಳುತ್ತಿವೆ. ಬೆಟ್ಟಕ್ಕೆ ಹೊಂದಿಕೊಂಡಂತೆ ಸ್ಮಶಾನವೂ ಕೂಡ ಇದೆ. ಇನ್ನು ಬೆಟ್ಟಕ್ಕೆ ಹೊಂದಿಕೊಂಡಂತೆ ಪಶ್ಚಿಮ ದಿಕ್ಕಿನಲ್ಲಿ ಹೂಜಗಲ್ ಗ್ರಾಮವಿದ್ದು, ಅಲ್ಲಿ ಜೈನ ಮುನಿಗಳು ಸಲ್ಲೇಖನ ವ್ರತ ಕೈಗೊಂಡಿದ್ದ ನಿಷಧಿ ಶಾಸನಗಳ ಕುರುಹುಗಳಿವೆ.
ಒಂದೊಮ್ಮೆ ಇಲ್ಲಿ ಗಣಿಗಾರಿಕೆ ನಡೆದಲ್ಲಿ ಸುತ್ತಲಿನ ಪರಿಸರ ಹಾಳಾಗುತ್ತದೆ. ಹುಲ್ಲುಗಾವಲು ಹಾಗೂ ಕಿರು ಅರಣ್ಯ ಸಂಪೂರ್ಣ ನಾಶವಾಗಲಿದೆ. ಕ್ರಷರ್ ದೂಳಿನಿಂದಾಗಿ ಉಸಿರಾಡುವುದೂ ಕಷ್ಟವಾಗಲಿದೆ. ಜೊತೆಗೆ ಕೃಷಿ ಚಟುವಟಿಕೆಗೂ ಹೊಡೆತ ಬೀಳಲಿದೆ. ಹೀಗಾಗಿ ಗಣಿಗಾರಿಕೆಗೆ ಅನುಮತಿ ನೀಡಬಾರದು. ಇಲ್ಲಿನ ಹುಲ್ಲುಗಾವಲು ಹಾಗೂ ಪರಿಸರವನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ಗುಡ್ಡದ ಸುತ್ತಲಿನ ಗ್ರಾಮಸ್ಥರು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮಾಗಡಿ ತಾಲ್ಲೂಕಿನ ಹತ್ತಾರು ಗುಡ್ಡಗಳು ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳಿಂದಾಗಿ ನಾಶವಾಗಿವೆ. ವೆಂಗಳಪ್ಪನ ತಾಂಡ್ಯ, ಹಂಚಿಕುಪ್ಪೆ ಬೆಟ್ಟ, ಉಡುವೆಗೆರೆ ಬೆಟ್ಟ. ಮೋಟಗೊಂಡನಹಳ್ಳಿ, ಬ್ಯಾಲಕೆರೆ, ಕಣ್ಣೂರು ಬೋವಿಪಾಳ್ಯ, ತಗ್ಗೀಕುಪ್ಪೆ, ಮತ್ತೀಕೆರೆ, ಗಿರಿಜಾಪುರ ಹೊಸೂರು, ಬಿಟ್ಟಸಂದ್ರ, ಎಣ್ಣೆಗೆರೆ ಮೊದಲಾದ ಗ್ರಾಮಗಳ ಗುಡ್ಡಗಳಲ್ಲಿ ಗಣಿಗಾರಿಕೆ ನಿರಂತರವಾಗಿ ನಡೆದಿದೆ.
ವೆಂಗಳಪ್ಪನ ತಾಂಡ್ಯ ಸುತ್ತಲಿನ ಗುಡ್ಡದಲ್ಲೇ ಸುಮಾರು ಹದಿನೈದು ಕ್ರಷರ್‌ಗಳು ಇರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ಸ್ಫೋಟದಿಂದ ರಂಗನಾಥಸ್ವಾಮಿ ದೇಗುಲದ ಗೋಡೆಗಳು ಬಿರುಕು ಬಿಟ್ಟಿದ್ದರೂ ಯಾರೂ ಕ್ರಮ ಕೈಗೊಳ್ಳಲಾಗಿಲ್ಲ.
ಜನಪ್ರತಿನಿಧಿಗಳ ಜಾಣಮೌನ ಮಾಗಡಿ ತಾಲ್ಲೂಕಿನಾದ್ಯಂತ ನಡೆದಿರುವ ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಶಾಸಕರೂ ಸೇರಿದಂತೆ ಎಲ್ಲರದ್ದು ಜಾಣ ಮೌನ. ಹಾಲಿ, ಮಾಜಿ ಶಾಸಕರ ಆದಿಯಾಗಿ ಯಾರೊಬ್ಬರೂ ಈ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಿಲ್ಲ. ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಪ್ರಯತ್ನ ಆಗಿಲ್ಲ. ಅಧಿಕಾರಿಗಳೂ ಕಂಡು ಕಾಣದಂತೆ ಇದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಹಿಂದೆಯೇ ಪಡೆದಿದ್ದಾರ ಅನುಮತಿ? ಗಿರಿಧರ್ ಕಸಬೆ ಎಂಬುವವರು ಜೇನುಕಲ್ಲುಗುಡ್ಡದ 48 ಎಕರೆ ಭೂಮಿಯಲ್ಲಿ ಗಣಿಗಾರಿಕೆಗೆ ಮುಂದಾಗಿದ್ದಾರೆ. ಸಾಕಷ್ಟು ಹಿಂದೆಯೇ ಇವರು ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಕ್ರಷರ್ ಆರಂಭಕ್ಕೆ ಆಸಕ್ತಿ ತೋರಿದ್ದು, ಬೇಕಾದ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದಾರೆ. ಆದರೆ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ.
ಜೇನುಕಲ್ಲು ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಸ್ಥಳೀಯರು ಮನವಿ ನೀಡಿದ್ದಾರೆ. ಇದಕ್ಕೆ ಈ ಹಿಂದೆಯೇ ಅನುಮತಿ ನೀಡಲಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಮನಗರ ಜಿಲ್ಲಾಧಿಕಾರಿ ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ
ಇದನ್ನೂ ಓದಿ: ಮಂಡ್ಯದಲ್ಲಿ ಏಕಾಏಕಿ ಕೇಳಿಬಂದ ಭಾರಿ ಶಬ್ದ; ಹುಟ್ಟಿಕೊಂಡಿತು ಅಕ್ರಮ ಗಣಿಗಾರಿಕೆಯ ಗುಮಾನಿ