ಪ್ರೀತಿಸುವಂತೆ ಕಾಟ: ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಮನೆಯಲ್ಲೇ ನೇಣಿಗೆ ಶರಣಾಗಿರುವಂತಹ ಘಟನೆ ನಡೆದಿದೆ. ಸದ್ಯ ಯುವತಿ ತಂದೆ ದೂರಿನ ಮೇರೆಗೆ ಯುವಕ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ, ಜನವರಿ 10: ಜೆಡಿಎಸ್ (JDS) ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ನಡೆದಿದೆ. ರಿಶಾಲ್ ಡಿಸೋಜಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪ ಕೇಳಿಬಂದಿದೆ. ಸದ್ಯ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಸುವಂತೆ ಕಾಟ
ಚೈತ್ರಾ ಕೋಠಾರಕರ ಪುತ್ರ ಚಿರಾಗ್, ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿ ನಿವಾಸಿ ರಿಶಾಲ್ ಡಿಸೋಜಾಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಕಳೆದ ಕೆಲ ದಿನಗಳಿಂದ ಯುವತಿ ಮನೆ ಬಳಿ ಬಂದು ಹೋಗುತ್ತಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಬೇಗ ಸತ್ತು ಹೋಗು ಎಂದು ಚಿರಾಗ್ ಹೇಳಿದ್ದ. ಇದರಿಂದ ನೊಂದ ರಿಶಾಲ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಸದ್ಯ ರಿಶಾಲ್ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ದೂರಿನ ಮೇರೆಗೆ ಚಿರಾಗ್ ವಿರುದ್ಧ ಕದ್ರಾ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಲಾರಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣ
ಲಾರಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬ್ಯಾಡರಹಳ್ಳಿ ಗೇಟ್ ಬಳಿ ನಡೆದಿದೆ. ಸೈಮನ್ ಮೃತ ಕಾರು ಚಾಲಕ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಕಬ್ಬು ಕಟಾವು ಕಾರ್ಮಿಕರು ತೆರಳ್ತಿದ್ದ ಟ್ರ್ಯಾಕ್ಟರ್ ಪಲ್ಟಿ: ತಾಯಿ, ಇಬ್ಬರು ಮಕ್ಕಳು ಸಾವು
ಇನ್ನು ಘಟನೆಯಲ್ಲಿ ಶಕೀಲಾ, ಹ್ಯಾಲಿಸನ್, ಲಿಯೋ, ಇಲಿಯಾಸ್ಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ದಾಬಸ್ಪೇಟೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ.
ಬೈಕ್ ಅಪಘಾತದಲ್ಲಿ ಸವಾರ ಸಾವು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕಟ್ಟೆಯಲ್ಲಿ ಬೈಕ್ ಅಪಘಾತದಲ್ಲಿ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಚೇತನ್ ಮೊಗವೀರ(24) ಮೃತ ಬೈಕ್ ಸವಾರ. ರಸ್ತೆ ಕಾಮಗಾರಿ ವೇಳೆ ಸೂಚನಾಫಲಕ ಅಳವಡಿಕೆ ಮಾಡದಿದ್ದಕ್ಕೆ ಅಪಘಾತ ಸಂಭವಿಸಿರುವ ಆರೋಪ ಕೇಳಿಬಂದಿದೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.