ಬೇಡ್ತಿ-ವರದಾ ನದಿ ಜೋಡಣೆಗೆ ಸಿಡಿದೆದ್ದ ಮಠಾಧೀಶರು, ಜನಪ್ರತಿನಿಧಿಗಳು: ತಮ್ಮ ನಿಲುವು ಸ್ಪಷ್ಟಪಡಿಸಿದ ರಾಜಕಾರಣಿಗಳು
ವ್ಯಾಪಕ ವಿರೋಧದ ನಡುವೆಯೂ ಬೇಡ್ತಿ ಹಾಗೂ ವರದಾ ನದಿಗಳ ಜೋಡಣೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಈ ಭಾಗದ ಜನಪ್ರತಿನಿಧಿಗಳು ಮಠಾಧೀಶರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪಕ್ಷಾತೀತವಾಗಿ ಬೃಹತ್ ಸಮಾವೇಶ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.

ಕಾರವಾರ, ಜನವರಿ 11: ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ (River Diversion Project) ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮಠಾಧೀಶರು ಸಿಡಿದೆದ್ದಿದ್ದು, ಶಿರಸಿಯಲ್ಲಿಂದು ಬೃಹತ್ ಸಮಾವೇಶ ಮಾಡುವ ಮೂಲಕ ಸರ್ಕಾರಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಯೋಜನೆ ಜಿಲ್ಲೆಗೆ ಮಾರಕ ಎಂದು ಒಕ್ಕೊರಲಿನಿಂದ ಖಂಡಿಸಲಾಗಿದ್ದು, ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಲಾಗಿದೆ.
ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಂಇಎಸ್ ಕಾಲೇಜು ಮೈದಾನದಲ್ಲಿ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಿತು. ಪಕ್ಷಾತೀತವಾಗಿ ರಾಜಕೀಯ ನಾಯಕರು ಭಾಗಿಯಾಗಿದ್ದರು.
ಈ ಯೋಜನೆಯಿಂದ ಅನಕೂಲಕ್ಕಿಂತ ಅನಾನುಕೂಲ ಹೆಚ್ಚು: ಸಚಿವ ಮಂಕಾಳು ವೈದ್ಯ
ಸಮಾವೇಶದಲ್ಲಿ ಮಾತನಾಡಿದ ಸಚಿವ ಮಂಕಾಳು ವೈದ್ಯ, ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯಿಂದ ಅನಕೂಲಕ್ಕಿಂತ ಅನಾನುಕೂಲ ಹೆಚ್ಚು. ಹಾಗಾಗಿ ಇಂತಹ ಯೋಜನೆ ಆದಷ್ಟು ಬೇಗ ಕೈಬಿಡಬೇಕು. ಈ ಯೋಜನೆ ಜಿಲ್ಲೆಗೆ ಮಾರಕ ಆಗುತ್ತೆ ಎಂಬುವುದು ಖಚಿತವಾಗಿದೆ. ಈ ಯೋಜನೆಯ ವಿರುದ್ದವಾಗಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಮ್ಮನ್ಮ ಜನ ಪ್ರತಿನಿಧಿಯಾಗಿ ನೀವು ಆಯ್ಕೆ ಮಾಡಿದ್ದೀರಿ. ನಿಮಗೆ ಮಾರಕಾವಾಗುವ ಯೋಜನೆಗಳಿಗೆ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ
ಈ ಹಿಂದೆ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಅಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಾಹೇಬ್ರು ಸ್ಪೀಕರ್ ಆಗಿದ್ದರು. ಆಗ ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಕೊಡದೆ ಇದ್ದಿದ್ದರೆ ಇಂದು ಸ್ವಾಮಿಜಿಯವರು ಹಾಗೂ ನಾವು, ನೀವು ಈ ಬಿಸಿಲಲ್ಲಿ ಬರುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.
ರಾಜಕೀಯ ಏನೇ ಇರಲಿ, ಇಂದು ಜಿಲ್ಲೆಗಾಗಿ ಇಲ್ಲಿ ಸೇರಿದ್ದೇವೆ. ಈ ವೇದಿಕೆಯಲ್ಲಿ ಸ್ವಾಮಿಜಿಯವರ ನೆತೃತ್ವದಲ್ಲಿ ಆಗುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಇಲ್ಲೊಂದು ಹೇಳುವುದು ಹೊರಗೆ ಹೋಗಿ ಇನ್ನೊಂದು ಹೇಳುವುದು ಸರಿ ಅಲ್ಲ. ಜಿಲ್ಲೆಗಾಗಿ ನಾವು ಇಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಈ ಯೋಜನೆ ಇಡಿ ಜಿಲ್ಲೆಗೆ ಹಾನಿ ಆಗುವ ಯೋಜನೆ ಆಗಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಈಗಲೂ ನಮ್ಮ ಮಾತಿಗೆ ಬದ್ಧ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಸಮಾವೇಶದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದು, ನಾನು ಈ ಹಿಂದೆ ಕೊಟ್ಟ ಮಾತಿಗೆ ಈಗಲೂ ಕೂಡ ಬದ್ಧನಿದ್ದೇನೆ. ಈ ವೇದಿಕೆಯಲ್ಲಿ ನನ್ನ ಬಗ್ಗೆ ಕೆಲವು ಮಾತುಗಳು ಬಂದಿವೆ, ಆದರೆ ಈ ಯೋಜನೆ ವಿರುದ್ಧವಾಗಿ ನಾನು ಯಾವಾಗಲೂ ಇದ್ದೇನೆ. ಕೆಲವರ ಮಾತಿಗೆ ಉತ್ತರ ಕೊಡಲು ಬರಲ್ಲ ಅಂತ ಅಲ್ಲ, ಸೂಕ್ತ ಉತ್ತರ ಕೊಡುವುದು ನನಗೂ ಗೊತ್ತಿದೆ. ಆದರೆ ಈ ಸುಂದರ ವೇದಿಕೆಯಲ್ಲಿ ಉತ್ತರ ಕೊಡುವುದು ಸರಿ ಅಲ್ಲ ಎಂದಿದ್ದಾರೆ.
ಶಿರೂರು ಗುಡ್ಡ ಕುಸಿತ ಸೇರಿದಂತೆ ಹತ್ತಾರು ಕಷ್ಟ ನೋಡಿದ್ದೇವೆ. ನಾವು ಅನೇಕ ತೊಂದರೆ ತೊಡಕುಗಳನ್ನ ಅನುಭವಿಸಿ ಹೇಳುತ್ತಿದ್ದೇವೆ. ಈ ಜಿಲ್ಲೆಯ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗಬೇಕು. ಧಾರಣಾ ಸಾಮರ್ಥ್ಯ ಬಗ್ಗೆ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಹೇಳಿದ್ದೆ. ನಾನು ಹೇಳಿಲ್ಲ ಅಂತಾ ಯಾರಾದ್ರೂ ಹೇಳಿದ್ರೆ ಪ್ರೂವ್ ಮಾಡೋಕೆ ಸಿದ್ಧ ಎಂದರು.
ಹೋರಾಟ ಅವಶ್ಯಕ ಎಂದ ಶಾಸಕ ಶಿವರಾಂ ಹೆಬ್ಬಾರ್
ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮಾತನಾಡಿದ್ದು, ಈ ವೇದಿಕೆಯಲ್ಲಿ ನಾನು ಯಾವುದೇ ರಾಜಕೀಯ ಮಾತು ಹೇಳಲ್ಲ. ಇಂದು ನಮ್ಮ ಜಿಲ್ಲೆಗಾಗಿ ನಾವೆಲ್ಲಾ ಒಂದಾಗುವ ಅವಶ್ಯಕತೆ ಇದೆ. ನಮ್ಮ ಒಗ್ಗಟ್ಟಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಬಾರದು. ಈ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಹೋರಾಟ ಅವಶ್ಯಕ. ಸ್ವಾಮಿಜಿಗಳ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರೋಣ ಎಂದಿದ್ದಾರೆ.
ಯೋಜನೆ ಜಾರಿಯಾದರೆ ನಮ್ಮ ಪರಿಸ್ಥಿತಿ ಏನು? ಶಾಸಕ ಭಿಮಣ್ಣಾ ನಾಯ್ಕ್ ಪ್ರಶ್ನೆ
ಶಿರಸಿ ಶಾಸಕ ಭಿಮಣ್ಣಾ ನಾಯ್ಕ್ ಮಾತನಾಡಿದ್ದು, ಇಡಿ ರಾಜ್ಯಕ್ಕೆ ಜಲ ಶಕ್ತಿ, ವಿದ್ಯುತ್ ಶಕ್ತಿ ನೀಡುವ ಜಿಲ್ಲೆ ನಮ್ಮದು. ನಮ್ಮ ಜಿಲ್ಲೆಯ ಸುಂದರ ಪರಿಸರ ತ್ಯಾಗ ಮಾಡಿದ್ದೇವೆ. ನೌಕಾನೆಲೆ ಹಾಗೂ ಕೈಗಾ ಯೋಜನೆಗೆ ಅನೇಕ ಹಳ್ಳಿಗಳ ಜನ ಮನೆ ಜಮೀನು ಕಳೆದುಕೊಂಡಿದ್ದಾರೆ. ನಿರಂತರವಾಗಿ ಯೋಜನೆ ಹೆಸರಿನಲ್ಲಿ ನಮ್ಮ ಮೇಲೆ ಅನ್ಯಾಯ ಆಗುತ್ತಿದೆ. ತಜ್ಞರು ಮತ್ತು ಪರಿಸರವಾದಿಗಳು ನೀಡಿರುವ ಸಲಹೆ ಮೇರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಈ ಯೋಜನೆ ಜಾರಿಗೆ ಬಂದರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?: ಪ್ರಮುಖ 11 ಕಾರಣ ಇಲ್ಲಿವೆ
ಕೇಂದ್ರ ಇರಬಹುದು, ರಾಜ್ಯ ಇರಬಹುದು ಸ್ಥಳಿಯರ ಕೂಗು ಕೇಳಬೇಕು. ಸ್ಥಳಿಯರ ಅನುಭವಿಸುತ್ತಿರುವ ಸಮಸ್ಯೆಗಳನ್ನ ಕೇಳಬೇಕು. ಪ್ರಕೃತಿ ವಿಕೋಪದಿಂದ ಜಿಲ್ಲೆಯ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಸಾಲ ಮನ್ನಾ ಮಾಡುವಂತೆ ನಾವು ಮನವಿ ಕೊಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಈ ಯೋಜನೆ ಬೇಕಾ? ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಗೆ ತರಬಾರದು. ಸ್ವಾಮೀಜಿಯವರ ನೆತೃತ್ವದಲ್ಲಿ ನಾವು ಒಗ್ಗಟ್ಟಾಗಿ ಈ ಯೋಜನೆ ಖಂಡಿಸೋಣ, ಜಿಲ್ಲೆಯ ಜನಪ್ರತಿನಿಧಿಗಳು ಸ್ವಾಮೀಜಿಯವರ ಜೊತೆಗೆ ಇದ್ದೇವೆ ಎಂದರು.
ಸಣ್ಣ ದೀಪ ಕಾಡ್ಗಿಚ್ಚು ಆಗಲು ಬಿಡಬೇಡಿ: ಭಟ್ಟಾಕಳಂಕ ಭಟ್ಟಾಚಾರ್ಯ ಸ್ವಾಮೀಜಿ
ಶಿರಸಿ ಬಳಿಯ ಸೋಂದೆ ದಿಗಂಬರ ಜೈನ್ ಮಠದ ಸ್ವಸ್ತಿ ಶ್ರೀ ಭಟ್ಟಾಕಳಂಕ ಭಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ನದಿ ನಮಗೆ ಎಲ್ಲವನ್ನೂ ಕೊಡುತ್ತಿದೆ ಅದಕ್ಕೆ ಸರ್ಕಾರ ತೊಂದ್ರೆ ಕೊಡಬಾರದು. ಜನಪರ, ಪೃಕೃತಿ ಪರ, ಆರೋಗ್ಯ ಪರ, ವಾತಾವರಣದ ಸಮೋತಲನ ಮಾಡುವ ಸರ್ಕಾರವೇ ಉತ್ತಮ ಸರ್ಕಾರ. ಸರ್ಕಾರ ಪ್ರಕೃತಿ ನಾಶ ಮಾಡುವ ಯೋಜನೆ ಜಾರಿಗೆ ತರಬಾರದು. ಡಿಪಿಆರ್ ಮಾಡಲು ಸರ್ಕಾರ ಹೇಳಿರುವುದನ್ನ ವಾಪಸ್ ಪಡೆಯುವಂತೆ ಮಾಡಬೇಕು. ಕಾರ್ಯಕ್ರಮ ಆರಂಭದಲ್ಲಿ ನಾವು ಸಣ್ಣ ದೀಪ ಹಚ್ಚಿದ್ದೇವೆ, ಆ ಸಣ್ಣ ದೀಪ ಕಾಡ್ಗಿಚ್ಚು ಆಗಲು ಬಿಡಬೇಡಿ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:32 pm, Sun, 11 January 26