AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ತುಂಬ ಸಂಬಳ ಕೊಟ್ಟರೂ ಲಂಚ ತಗೊಂಡು ನಾಯಿ ಹಾಗೆ ಬಿದ್ದಿರುತ್ತಾರೆ; ಪೊಲೀಸರ ವಿರುದ್ಧ ಕೂಗಾಡಿದ ಆರಗ ಜ್ಞಾನೇಂದ್ರ

Araga Jnanendra: ಗೋ ಸಾಗಾಟ ಮಾಡೋದು ಯಾರು ಅಂತ ಪೊಲೀಸರಿಗೆ ಗೊತ್ತಿದೆ. ಆದರೆ, ಲಂಚ ತಿಂದು ಏನೂ ಗೊತ್ತಿಲ್ಲದಂತೆ ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರಿಗೆ ಆತ್ಮಗೌರವ ಬೇಕಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಬಹಿರಂಗವಾಗಿದೆ.

ಕೈ ತುಂಬ ಸಂಬಳ ಕೊಟ್ಟರೂ ಲಂಚ ತಗೊಂಡು ನಾಯಿ ಹಾಗೆ ಬಿದ್ದಿರುತ್ತಾರೆ; ಪೊಲೀಸರ ವಿರುದ್ಧ ಕೂಗಾಡಿದ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Dec 03, 2021 | 4:37 PM

Share

ಶಿವಮೊಗ್ಗ: ಅಧಿಕಾರಕ್ಕೆ ಬಂದಾಗಿಂದಲೂ ತಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳ ಗುಣಗಾನ ಮಾಡುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಇದೀಗ ಪೊಲೀಸರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಯ ವಿರುದ್ಧ ಫೋನ್​ನಲ್ಲಿ ಮಾತನಾಡಿರುವ ಸಚಿವ ಆರಗ ಜ್ಞಾನೇಂದ್ರ, ಪೊಲೀಸರಿಗೆ ಕೈ ತುಂಬಾ ಸಂಬಳ ಕೊಟ್ಟರೂ ಲಂಚ ತಿಂದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರೆಲ್ಲ ಕೆಟ್ಟು ಹೋಗಿದ್ದಾರೆ, ಎಂಜಲು ಕಾಸನ್ನು ತಿಂದು ಬದುಕುತ್ತಿದ್ದಾರೆ. ಪೊಲೀಸರಾಗಲು ಯೋಗ್ಯತೆ ಇಲ್ಲದಿದ್ದ ಮೇಲೆ ಯೂನಿಫಾರ್ಮ್ ಬಿಚ್ಚಿಟ್ಟು ಮನೆಗೆ ಹೋಗಲಿ ಎಂದು ಕೂಗಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ತಮ್ಮ ಕಚೇರಿಯಲ್ಲಿ ಕುಳಿತು ಮೊಬೈಲ್​ನಲ್ಲಿ ಮಾತನಾಡುತ್ತಿರುವ ಸಚಿವ ಆರಗ ಜ್ಞಾನೇಂದ್ರ, ಗೋ ಸಾಗಾಟ ಮಾಡೋದು ಯಾರು ಅಂತ ಪೊಲೀಸರಿಗೆ ಗೊತ್ತಿದೆ. ಆದರೆ, ಲಂಚ ತಿಂದು ಏನೂ ಗೊತ್ತಿಲ್ಲದಂತೆ ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರಿಗೆ ಆತ್ಮಗೌರವ ಬೇಕಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಬಹಿರಂಗವಾಗಿದೆ.

ತಮ್ಮ ಇಲಾಖೆಯ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದರಿಂದ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಅಸಮಾಧಾನ ಹೊರಹಾಕಿದ್ದು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು, ಪೊಲೀಸರ ಕೈಗೆ ಕಾನೂನು ನೀಡಿದರೂ ಅಕ್ರಮ ಗೋ ಸಾಗಾಟ ನಡೆಯುತ್ತಿದೆ. ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತೇವೆ. ಆದರೂ, ಎಂಜಲು ಕಾಸಿನಾಸೆಗೆ ಲಂಚ ಪಡೆದು ಗೋ ಸಾಗಾಟಕ್ಕೆ ಅವಕಾಶ ಕೊಡುತ್ತಿದ್ದಾರೆ. ನಾನು ಗೃಹ ಸಚಿವ ಸ್ಥಾನದಲ್ಲಿ ಇರಬೇಕೋ ಬೇಡವೋ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪದ ತಮ್ಮ ನಿವಾಸದ ಕಚೇರಿಯಿಂದ ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್​​ನಲ್ಲಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಗೋಹತ್ಯೆ‌ ನಿಷೇಧ ಕಾಯ್ದೆ ಜಾರಿಗೆ ತಂದು, ಪೊಲೀಸರ ಕೈಗೆ ಕಾನೂನು ನೀಡಿದರು ಸಹ ಅಕ್ರಮ ಗೋಸಾಗಾಟ ನಿಲ್ಲದೇ ಇರುವುದರಿಂದ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಕೈ ತುಂಬಾ ಸಂಬಳ ಕೊಡುತ್ತಿದ್ದೇವೆ. ಆದರೂ ಅವರು ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಯೂನಿಫಾರ್ಮ್ ಬಿಚ್ಚಿಟ್ಟು, ಮನೆ ಕಡೆ ಹೋಗಿ, ಮಣ್ಣು ಹೊರಲಿ ಎಂದು ಕಿಡಿಕಾರಿದ್ದಾರೆ.

ಪೊಲೀಸರಿಗೆ ಆತ್ಮ ಗೌರವವೆಂಬುದೇ ಇಲ್ಲ. ಎಲ್ಲ ಪೊಲೀಸರೂ ಕೆಟ್ಟು ಹಾಳಾಗಿ ಹೋಗಿದ್ದಾರೆ. ಪೊಲೀಸರು ಲಂಚ ಪಡೆದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಅಂಥವರು ಪೊಲೀಸ್ ಯೂನಿಫಾರ್ಮ್ ಬಿಚ್ಚಿಟ್ಟು ಹೋಗಲಿ ಎಂದು ಆರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ.

ಇನ್ನು, ಈ ವಿಡಿಯೋ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದು, ನಾನು ಎಲ್ಲಾ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋವಿನ ಕಳ್ಳರಿಗೆ, ಗೋ ಸಾಗಾಣಿಕೆಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ. ನನಗೆ ಪೊಲೀಸರ ಬಗ್ಗೆ ಅಪಾರವಾದ ಗೌರವವಿದೆ. ಮೊನ್ನೆ ಗೋ ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡವರು ಬದುಕುಳಿದಿರುವುದೇ ದೊಡ್ಡ ಪವಾಡ. ಆ ಘಟನೆಯಿಂದ ಬೇಸರವಾಗಿ ಮಾತನಾಡಿದ್ದೇನೆ. ಎಲ್ಲ ಪೊಲೀಸರೂ ಒಂದೇ ರೀತಿ ಇರುವುದಿಲ್ಲ. ಈ ರೀತಿಯ ಕೆಲವು ಪೊಲೀಸರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಕರ್ನಾಟಕದಲ್ಲಿ ಸಾಕಷ್ಟು ದಕ್ಷ ಪೊಲೀಸರು ಇದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೋರಕ್ಷಕರ ಮೇಲೆ ವಾಹನ ಹತ್ತಿಸಿದ್ದ ಪ್ರಕರಣ; ಉಡುಪಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವ ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ ವಿರುದ್ಧವೇ ಕೇಸುಗಳಿವೆ, ಈಗ ಅವರೇ ಗೃಹ ಮಂತ್ರಿ! ಹೀಗಾದರೆ ನ್ಯಾಯ ಸಿಗುತ್ತಾ? -ಕಿಮ್ಮನೆ ರತ್ನಾಕರ್ ವ್ಯಂಗ್ಯ

Published On - 4:33 pm, Fri, 3 December 21