ಶಿವಮೊಗ್ಗ: ಮೀಸಲಾತಿ ಉಳಿಸಿಕೊಳ್ಳಲು ಈಡಿಗರ ಹೋರಾಟ, ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಂತೆ ಆಗ್ರಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 24, 2023 | 10:54 PM

ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟ ತಾರಕ್ಕಕ್ಕೇರಿರುವ ಬೆನ್ನಲ್ಲೇ, ಸರ್ಕಾರ ಯಾವುದೇ ಕಾರಣಕ್ಕೂ ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡಬಾರದು ಎಂದು ಶಿವಮೊಗ್ಗ ಜಿಲ್ಲೆಯಲ್ಲಿ ಸಮಾವೇಶದ ಮೂಲಕ ಈಡಿಗ ಸಮಾಜವು ಹಕ್ಕೋತ್ತಾಯ ಮಾಡಿದೆ.

ಶಿವಮೊಗ್ಗ: ಮೀಸಲಾತಿ ಉಳಿಸಿಕೊಳ್ಳಲು ಈಡಿಗರ ಹೋರಾಟ, ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಂತೆ ಆಗ್ರಹ
ಪ್ರಬಲ ಜಾತಿಗಳಿಗೆ ಮೀಸಲಾತಿ ನೀಡಬಾರದೆಂದು ಈಡಿಗ ಸಮಾಜದಿಂದ ಹಕ್ಕೋತ್ತಾಯ ಸಮಾವೇಶ
Follow us on

ಶಿವಮೊಗ್ಗ: ಈಗಾಗಲೇ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ಆರಂಭಿಸಿದ್ದು, ಈ ಜಾತಿಗೆ 2ಎ ಮೀಸಲಾತಿ ನೀಡಿದಲ್ಲಿ, ಈಡಿಗ, ಹಾಲುಮತ ಸೇರಿದಂತೆ 102 ಜಾತಿಗಳಿಗೆ ಅನ್ಯಾಯವಾಗಲಿದೆ. ಶೋಷಿತ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಬಲಾಡ್ಯ ಜಾತಿಗಳಿಗೆ ಮೀಸಲಾಗಲಿದೆ. ಆಗ ಶೋಷಿತ ಸಮಾಜಗಳು ಮತ್ತೆ ಶೋಷಣೆಗೊಳಗಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ಆಗ್ರಹಿಸಿ ಶ್ರೀನಾರಾಯಣ ಗುರು ವಿಚಾರ ವೇದಿಕೆ ಹಾಗೂ ನಾರಾಯಣ ಗುರು ಸಮಾಜ ಹಿತರಕ್ಷಣಾ ಸಮಿತಿಯಿಂದ ಶಿವಮೊಗ್ಗದಲ್ಲಿ ಬೃಹತ್ ಪಾದಯಾತ್ರೆ ಹಾಗೂ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ 25 ಸಾವಿರಕ್ಕೂ ಅಧಿಕ ಜನರು ಸೇರುವ ಮೂಲಕ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದ್ದರು. ಮೀಸಲಾತಿ ಮಾತ್ರವಲ್ಲದೆ ಶರಾವತಿ ಸಂತ್ರಸ್ತರಿಗೆ ಕೂಡಲೇ ನ್ಯಾಯ ಒದಗಿಸಬೇಕು, ಸಿಗಂದೂರು ದೇವಾಲಯದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ಇನ್ನು ಶೀಘ್ರದಲ್ಲೇ ಉದ್ಘಾಟನೆಯಾಗಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಹೆಸರಿಡಬೇಕು ಎಂದು ಹಕ್ಕೊತ್ತಾಯ ಸಮಾವೇಶದಲ್ಲಿ ಆಗ್ರಹಿಸಿದ್ದು ವಿಶೇಷವಾಗಿತ್ತು.

ಹಕ್ಕೊತ್ತಾಯ ಸಮಾವೇಶದುದ್ದಕ್ಕೂ ಮಾತನಾಡಿದ ಮುಖಂಡರುಗಳು ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ಧವಾಗಿಯಲ್ಲ. ಬದಲಿಗೆ ನಾವು ನಮ್ಮ ಮೀಸಲಾತಿ ಉಳಿಸಿಕೊಳ್ಳಲು ಹೋರಾಟ ಮಾಡುತಿದ್ದೇವೆ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಮೀಸಲಾತಿ ವಿಷಯ ಹೈಕೋರ್ಟ್ ನಲ್ಲಿದೆ. ಹೀಗಾಗಿ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಆದರೆ ಈಡಿಗರಿಗೆ ಸಿಗಬೇಕಾದ ಮೀಸಲಾತಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಒಂದು ವೇಳೆ ಈಡಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎನ್ನುವುದಾದರೆ ನಾವು ಎಲ್ಲರೂ ಪಕ್ಷಬೇಧ ಮರೆತು ಒಟ್ಟಾಗಿ ಹೋರಾಟ ಮಾಡಲೇಬೇಕು. ಇದಕ್ಕಾಗಿಯಾದರೂ ನಾವೆಲ್ಲ ಒಟ್ಟಾಗಿರಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ:2C 2D Reservation ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಕೆಟಗರಿಗೆ ಮೀಸಲಾತಿಗೆ ಬ್ರೇಕ್ ಹಾಕಿದ ಕರ್ನಾಟಕ ಹೈಕೋರ್ಟ್

2ಎ ಮೀಸಲಾತಿ ಉಳಿಸಿಕೊಳ್ಳುವ ಉದ್ದೇಶದಿಂದ ಶಿವಮೊಗ್ಗದಲ್ಲಿ ನಡೆದ ಹಕ್ಕೊತ್ತಾಯ ಸಮಾವೇಶದಲ್ಲಿ ಮುಖಂಡರು ಹಾಗೂ ಜನರು ಪಕ್ಷಾತೀತವಾಗಿ ಪಾಲ್ಗೊಂಡು, ನಾವು ನಮ್ಮ ಹಕ್ಕುಗಳನ್ನು ಪಡೆಯಲು ರಾಜಕಾರಣ ಮರೆತು ಒಟ್ಟಾಗಿ ಹೋರಾಟ ಮಾಡಬೇಕು ಎಂದು ತೀರ್ಮಾನ ಕೈಗೊಂಡಿದ್ದು ವಿಶೇಷವಾಗಿತ್ತು. ಈ ಹಕ್ಕೋತ್ತಾಯದಲ್ಲಿ ಸಮಾಜದ ಹಿರಿಯ ಮತ್ತು ಕಾಂಗ್ರೆಸ್​ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಸುನೀಲ್ ಕುಮಾರ್ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ದೂರ ಉಳಿದಿದ್ದು ಹೋರಾಟದ ಶಕ್ತಿ ಕಡಿಮೆಯಾಗಿದ್ದು ಎದ್ದು ಕಾಣುತ್ತಿತ್ತು.

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Tue, 24 January 23