ಹಿಂದುಳಿದ ವರ್ಗಗಳ ಆಯೋಗದ ವರದಿ ಬಳಿಕ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: ಸಿಎಂ ಬೊಮ್ಮಾಯಿ ಭರವಸೆ
ಮಹಾರಾಷ್ಟ್ರ, ಗುಜರಾತ್‌ನಲ್ಲಿ ಮೀಸಲಾತಿ ವಿಚಾರದಲ್ಲಿ ಹಿಂದೇಟು ಆದಂತೆ ಕರ್ನಾಟಕದಲ್ಲಿ ಪಂಚಮಸಾಲಿಗೆ ಆಗಬಾರದು, ಹೀಗಾಗಿ ಕೋರ್ಟ್ನಲ್ಲಿ ಸರ್ಕಾರ ಪ್ರಬಲವಾಗಿ ವಾದಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ (Panchamasali 2A Reservation) ಶಾಶ್ವತವಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಬ್ಬರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಹರಜಾತ್ರೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಮೀಸಲಾತಿ ವಿಚಾರದಲ್ಲಿ ಹಿಂದೇಟು ಆದಂತೆ ಕರ್ನಾಟಕದಲ್ಲಿ ಆ ರೀತಿ ಆಗಬಾರದು. ಮತ್ತೊಬ್ಬರಿಗೆ ಅನ್ಯಾಯವಾಗದಂತೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಬರೀ ಗಡುವು ನೀಡಿದರೆ ಸಮಾಜಕ್ಕೆ ಶಾಶ್ವತವಾಗಿ ಅನ್ಯಾಯವಾಗುತ್ತದೆ. ಈಗಾಗಲೇ ಪಂಚಮಸಾಲಿಗರಿಗೆ ಮೀಸಲಾತಿ ಬಗ್ಗೆ ಮೊದಲ ಹೆಜ್ಜೆ ಇಡಲಾಗಿದ್ದು, ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಸರ್ಕಾರ ಇಡಬೇಕಾಗುತ್ತದೆ. ನ್ಯಾ.ಸದಾಶಿವ ಆಯೋಗ ವರದಿ ಸಲ್ಲಿಸಿ ಹತ್ತು ವರ್ಷಗಳಾಗಿವೆ. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕ್ರಮ ಕೈಗೊಂಡಿರಲಿಲ್ಲ. ಆದರೆ ನಾನು ಕೆಲ ದಿನಗಳಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: 2C 2D Reservation ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಕೆಟಗರಿಗೆ ಮೀಸಲಾತಿಗೆ ಬ್ರೇಕ್ ಹಾಕಿದ ಕರ್ನಾಟಕ ಹೈಕೋರ್ಟ್
ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ಬಳಿಕ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ಹೇಳಿದ ಸಿಎಂ ಬೊಮ್ಮಾಯಿ, ಪಂಚಮಸಾಲಿಗರಿಗೆ ಮೀಸಲಾತಿ ವಿಚಾರದಲ್ಲಿ ಹೈಕೋರ್ಟ್‌ನಿಂದ ತಡೆ ಇದೆ. ಹೀಗಾಗಿ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಸಮರ್ಥವಾದ ವಾದ ಮಂಡಿಸಲಿದೆ. ಆ ಮೂಲಕ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ಮೀಸಲಾತಿ ಕೊಟ್ಟೇ ಕೊಡುತ್ತಾರೆ
ನಮ್ಮ ಪಂಚಮಸಾಲಿ ಸಮುದಾಯಕ್ಕೆ ಬೇಕಾಗಿದ್ದು ಮೀಸಲಾತಿ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಟ್ಟೇ ಕೊಡುತ್ತಾರೆ ಎಂದು ಹರಜಾತ್ರೆಯಲ್ಲಿ ಪಂಚಮಸಾಲಿ ಹರಿಹರ ಗುರುಪೀಠದ ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು. ನಾವು ಪಂಚಮಸಾಲಿ ಸಮಾಜದವರು, ಸಂಸ್ಕಾರ ವಂತರು. ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದು ನಮ್ಮ ಕೆಲಸವಲ್ಲ. ಯಾರನ್ನೋ ಗುರಿಯಾಗಿ ಇಟ್ಟುಕೊಂಡು ಮಾತಾಡುವುದು ನಮ್ಮ ಕೆಲಸವಲ್ಲ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿಗೆ ರಾಜ್ಯ ಸರ್ಕಾರ ನೀಡಿರುವ 2 ಸಿ, 2 ಡಿ ಮೀಸಲಾತಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಒಕ್ಕಲಿಗ ಮತ್ತು ಲಿಂಗಾಯತ ಪಂಚಮಸಾಲಿಗೆ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಜನವರಿ 12ರಂದು ಹೈಕೋರ್ಟ್ ಸೂಚಿಸಿ ಆದೇಶ ಹೊರಡಿಸಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಂತೆ ರಾಘವೇಂದ್ರ ಡಿ.ಜಿ.ಎನ್ನುವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಕಾಲಾವಕಾಶದ ಕೊರತೆ ಹಿನ್ನಲೆ ಕೋರ್ಟ್ ವಿಚಾರಣೆಯನ್ನು ಜ.30 ಕ್ಕೆ ಮುಂದೂಡಿ ಅಲ್ಲಿಯವರೆಗೆ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Sat, 14 January 23