2ಡಿ ಮೀಸಲಾತಿ ತಿರಸ್ಕರಿಸಿದ ಪಂಚಮಸಾಲಿ ಸಮುದಾಯ: ಬೊಮ್ಮಾಯಿಗೆ ಕೊನೆಯ ಎಚ್ಚರಿಕೆ ಕೊಟ್ಟ ಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಘೋಷಣೆ ವಿಚಾರವಾಗಿ ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದು, ಸಂಪುಟ ಸಭೆ ನೀಡಿದ 2ಡಿ ಮೀಸಲಾತಿಯನ್ನು ತಿರಸ್ಕಾರ ಮಾಡುತ್ತಿದ್ದೇವೆ ಎಂದಿದ್ದಾರೆ.

ಬೆಳಗಾವಿ: 2ಎ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯ (Panchamasali Reservation) ಪಟ್ಟು ಹಿಡಿದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿ ಮೀಸಲಾತಿ ನೀಡುವುದಾಗಿ ಹೇಳಿದ್ದರು. ಅದೇ ರೀತಿಯಾಗಿ 2022 ಡಿ. 29ರಂದು ಮೀಸಲಾತಿ ಘೋಷಣೆ ಮಾಡಿದ್ದರು. ಆದರೆ 2ಎ ಮೀಸಲಾತಿ ಬದಲಾಗಿ 2ಡಿ ರಚನೆ ಮಾಡಿ ಅದರಡಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಸದ್ಯ ಈ ವಿಚಾರವಾಗಿ ಜಿಲ್ಲೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಂಪುಟ ಸಭೆ ನೀಡಿದ 2ಡಿ ಮೀಸಲಾತಿಯನ್ನು ತಿರಸ್ಕಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಮೀಸಲಾತಿ ನೀಡ್ತಿರೋ ಇಲ್ವೋ ಹೇಳಬೇಕು: ಇಲ್ಲದಿದ್ದರೆ ಜ.13ರಂದು ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲಿ ಹೋರಾಟ
24 ಗಂಟೆಯಲ್ಲಿ ಸಿಎಂ ಮೀಸಲಾತಿ ನೀಡ್ತಿರೋ ಇಲ್ವೋ ಹೇಳಬೇಕು. ಸಿಎಂ ಮಾತು ತಪ್ಪಿದ್ದಾರೆ ಎಂದು ಇಡೀ ಸಮಾಜದಲ್ಲಿ ಆಕ್ರೋಶ ಕಾಡ್ತಿದೆ. ಸಿಎಂ ಬೊಮ್ಮಾಯಿ ಮಾತಿಗೆ ಗೌರವ ಕೊಟ್ಟು ಹೋರಾಟ ತಾತ್ಕಾಲಿಕ ಸ್ಥಗಿತ ಮಾಡಿದ್ದೇವು. ನಮ್ಮ ಸಮುದಾಯದ ಜನ ಆಡಳಿತ ಪಕ್ಷದ ಯಾವುದೇ ಶಾಸಕರು ಸಮಾಧಾನಗೊಂಡಿಲ್ಲ. ಜನವರಿ 12ರೊಳಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲವಾದ್ರೆ ಜ. 13ರಂದು ಶಿಗ್ಗಾಂವಿಯಲ್ಲಿ 30 ಸಾವಿರ ಜನ ಸೇರಿಸಿ ಹೋರಾಟ ಮಾಡುತ್ತೇವೆ. ಜನಶಕ್ತಿ ವ್ಯರ್ಥ ಮಾಡಲು ಬಿಡಲು ಸಾಧ್ಯವಿಲ್ಲ. ಈ ಜನ ಶಕ್ತಿಯೇ 2023ರ ಚುನಾವಣೆಯಲ್ಲಿ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಹೇಳಿದರು.
ಇದನ್ನೂ ಓದಿ: Panchamasali Reservation: ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ: ಬೊಮ್ಮಾಯಿಗೆ 24 ಗಂಟೆ ಗಡುವು ನೀಡಿದ ಶಾಸಕ ಯತ್ನಾಳ್
ಮೀಸಲಾತಿ ಕೊಡ್ತಿರೋ ಇಲ್ವೋ ಅಂತಾ ಸ್ಪಷ್ಟಪಡಿಸಬೇಕು. 2ಎಗೆ ಸರಿ ಸಮಾನವಾದ ಶಿಕ್ಷಣ, ಉದ್ಯೋದಲ್ಲಿ ಮತ್ತೊಂದು ಗ್ರೂಪ್ ಮಾಡಿ ಮೀಸಲಾತಿ ಕೊಡ್ತೀವಿ ಅಂದಿದ್ರಿ. ಎಲ್ಲವೂ ಗೊಂದಲ ಇರೋ ಕಾರಣ ಸಂಪುಟ ಸಭೆ ನಿರ್ಣಯವನ್ನು ತಿರಸ್ಕಾರ ಮಾಡುತ್ತಿದ್ದೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: Panchamasali Reservation ಮೀಸಲಾತಿ ಸಿಕ್ಕಿತ್ತೆಂದು ಯಾರು ಸಂಭ್ರಮಾಚರಣೆ ಮಾಡಬೇಡಿ: ಮೃತ್ಯುಂಜಯ ಸ್ವಾಮೀಜಿ ಕರೆ
ಸಿಎಂ ಆದಾಗಿನಿಂದ ಬೊಮ್ಮಾಯಿ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ: ಯತ್ನಾಳ್
ಬೊಮ್ಮಾಯಿ ಸಿಎಂ ಆಗಿದಾಗಿನಿಂದ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರದಿ ಕೊಡುವ ಪುಣ್ಯಾತ್ಮ ಮಳೆ ಐತಿ, ಕೊರೊನಾ ಐತಿ ಅಂತಾ ನೆಪ ಹೇಳಿದ್ರು. ಸುಮ್ಮನೆ ಕೊಡಬ್ಯಾಡ ಅಂತಾ ಹೇಳಿರಬೇಕು. ಇದರ ಹಿಂದ ಶಿಕಾರಿಪುರ ರಾಜ ಇದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪಗೆ ಟಾಂಗ್ ಕೊಟ್ಟರು. ಯಡಿಯೂರಪ್ಪ ಮಾತು ಕೇಳಿ ಎಷ್ಟು ದಿವಸ ನಮಗೆ ಟೋಪಿ ಹಾಕುತ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಪ್ರಶ್ನೆ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:12 pm, Thu, 5 January 23