ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ ಪ್ರಕರಣ: ಇಬ್ಬರ ಬಂಧನ
ಶಿವಮೊಗ್ಗದಲ್ಲಿ ನಡೆದ ಪ್ರತ್ಯೇಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಶಿವಮೊಗ್ಗ: ಬಜರಂಗದಳ (Bajrang Dal) ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದೆ. ಶಿವಮೊಗ್ಗದ (Shivamogga) ತುಂಗಾ ನಗರ ಪೊಲೀಸರು (Police) ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ (ಜೂನ್ 25) ರಾತ್ರಿ ಶಿವಮೊಗ್ಗದ ಟಿಪ್ಪು ನಗರ ಮತ್ತು ದ್ರೌಪದಂ ವೃತ್ತದಲ್ಲಿ ಪ್ರತ್ಯೇಕ ಗಲಾಟೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಎರಡು ಪ್ರಕರಣದಲ್ಲಿ ಅನ್ಯ ಕೋಮಿನ ಯುವಕರೇ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದ ಟಿಪ್ಪು ನಗರ ಹಾಗೂ ದ್ರೌಪದಂ ವೃತ್ತ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಮಹಿಳೆ ಮೇಲೆ ಹಲ್ಲೆ: ಮಚ್ಚು ನೀಡಿದವ ಅರೆಸ್ಟ್, ಆರೋಪಿ ಪತಿ ಬಂಧನಕ್ಕೆ ಶೋಧ
ಪ್ರಕರಣ 1:
ಗೂಡ್ಸ್ ಆಟೋಗೆ ಬೈಕ್ ತಾಗಿದ ವಿಚಾರದಲ್ಲಿ ಅನ್ಯಕೋಮಿನ ಯುವಕರು ಮತ್ತು ಇಬ್ಬರು ಬಜರಂಗದಳ ಕಾರ್ಯಕರ್ತರಾದ ಜಿತೇಂದ್ರ (47), ಸಂದೇಶ (35) ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಪ್ರಕರಣ 2:
ಇನ್ನು ಶಿವಮೊಗ್ಗ ನಗರದ ಗೋಪಾಳದ ದ್ರೌಪದಮ್ಮ ಸರ್ಕಲ್ನಲ್ಲಿ ನಡೆದ ಘಟನೆಯಲ್ಲಿ, ಮಾತನಾಡುವ ನೆಪದಲ್ಲಿ ಕರೆಸಿ ಭರ್ಜಿಯಿಂದ ಚುಚ್ಚಲಾಗಿತ್ತು. ಮಾತನಾಡುವುದಿದೆ ಬಾ ಎಂದು ಬಜರಂಗದಳ ಕಾರ್ಯಕರ್ತ ವಿಜಯಕುಮಾರ್ ಎಂಬಾತನನ್ನು ಕರೆಸಿಕೊಂಡು ಹಲ್ಲೆ ಮಾಡಲಾಗಿತ್ತು. ನಂತರ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬೈಕ್‌ನಲ್ಲಿ ವಾಪಸಾಗಲು ಮುಂದಾದ ವಿಜಯ್ ಕುಮಾರ್ಗೆ ಭರ್ಜಿಯಿಂದ ಚುಚ್ಚಲಾಗಿತ್ತು. ಇದರಿಂದ ಗಾಯಗೊಂಡಿದ್ದ ವಿಜಯ್ ಕುಮಾರ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನಷ್ಟು ಶಿವಮೊಗ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:09 am, Mon, 26 June 23