ಶಿವಮೊಗ್ಗದಲ್ಲಿ 2 ಕೋಮಿನ ಯುವಕರ ನಡುವೆ ಗಲಾಟೆ ಆಗಿದ್ಯಾಕೆ? ಕಾರಣ ಬಿಚ್ಚಿಟ್ಟ ಎಸ್ಪಿ
ಕೆಲ ತಿಂಗಳುಗಳಿಂದ ಶಾಂತವಾಗಿದ್ದ ಶಿವಮೊಗ್ಗ (Shivamogga) ಮತ್ತೊಮ್ಮೊ ಕೋಮು ದಳ್ಳುರಿಯಲ್ಲಿ (communal intolerance) ಬೇಯುತ್ತಿದೆ. ಎರಡು ಕೋಮಿನ ಗುಂಪುಗಳು ನಡುವೆ ಕಲಹ ನಡೆದ ಎರಡು ಪ್ರಕರಣಗಳುa ನಗರದಲ್ಲಿ ವರದಿಯಾಗಿವೆ. ಇನ್ನು ಈ ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ನಿನ್ನೆ (ಜೂನ್ 25) ರಾತ್ರಿ ಶಿವಮೊಗ್ಗ (Shivamogga) ನಗರದಲ್ಲಿ ನಡೆದಿದ್ದ 2 ಕೋಮಿನ ಯುವಕರ ನಡುವಿನ ಗಲಾಟೆ ಪ್ರಕರಣವನ್ನು ಪೊಲೀಸರು (Police) ಗಂಭೀರವಾಗಿ ಪರಿಗಣಿಸಿದ್ದಾರೆ. ಟಿಪ್ಪುನಗರ, ದ್ರೌಪದಂ ವೃತ್ತದಲ್ಲಿ ಅನ್ಯ ಕೋಮಿನ ಎರಡು ಗುಂಪಗಳ ನಡುವೆ ಘರ್ಷಣೆಗಳು ನಡೆದ ಬಳಿಕ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಎರಡು ಪ್ರತ್ಯೇಕ ಗಲಾಟೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ಮೊದಲ ಪ್ರಕರಣದಲ್ಲಿ ಡ್ರಿಂಕ್ ಅಂಡ್ ಡ್ರೈವ್ ನಡೆದಿದೆ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿದೆ ಕಾರಿಗೆ ಆಟೋ ಡಿಕ್ಕಿ ಹೊಡೆದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಎರಡನೇ ಪ್ರಕರಣದಲ್ಲಿ ವೈಯಕ್ತಿಕ ಕಾರಣಕ್ಕೆ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಇದರೊಂದಿಗೆ 2 ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಘಟನೆ ನಡೆಯುತ್ತಿದ್ದಂತೆಯೇ ಇಂದು ಶಿವಮೊಗ್ಗ ಡಿಆರ್ ಪೊಲೀಸ್ ಹಾಲ್ನಲ್ಲಿ ಅಧಿಕಾರಿಗಳು ಮಹತ್ವದ ಸಭೆ ನಡೆಸಿದರು. ಶಿವಮೊಗ್ಗ ಜಿಲ್ಲೆ ಕೋಮು ಸೂಕ್ಷ್ಮ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ನಿನ್ನೆ ನಡೆದ ಎರಡು ಗಲಾಟೆ ಕುರಿತು ಹಿತೇಂದ್ರ ಅವರು ಮಾಹಿತಿ ಪಡೆದುಕೊಂಡರು. ಇನ್ನು ಈ ಸಭೆಯಲ್ಲಿ ಪೂರ್ವ ವಲಯ ಐಜಿಪಿ ತ್ಯಾಗರಾಜನ್. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಪ್ರಕರಣ 1:
ಗೂಡ್ಸ್ ಆಟೋಗೆ ಬೈಕ್ ತಾಗಿದ ವಿಚಾರದಲ್ಲಿ ಅನ್ಯಕೋಮಿನ ಯುವಕರು ಮತ್ತು ಇಬ್ಬರು ಬಜರಂಗದಳ ಕಾರ್ಯಕರ್ತರಾದ ಜಿತೇಂದ್ರ (47), ಸಂದೇಶ (35) ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಪ್ರಕರಣ 2:
ಇನ್ನು ಶಿವಮೊಗ್ಗ ನಗರದ ಗೋಪಾಳದ ದ್ರೌಪದಮ್ಮ ಸರ್ಕಲ್ನಲ್ಲಿ ನಡೆದ ಘಟನೆಯಲ್ಲಿ, ಮಾತನಾಡುವ ನೆಪದಲ್ಲಿ ಕರೆಸಿ ಭರ್ಜಿಯಿಂದ ಚುಚ್ಚಲಾಗಿತ್ತು. ಮಾತನಾಡುವುದಿದೆ ಬಾ ಎಂದು ಬಜರಂಗದಳ ಕಾರ್ಯಕರ್ತ ವಿಜಯಕುಮಾರ್ ಎಂಬಾತನನ್ನು ಕರೆಸಿಕೊಂಡು ಹಲ್ಲೆ ಮಾಡಲಾಗಿತ್ತು. ನಂತರ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬೈಕ್‌ನಲ್ಲಿ ವಾಪಸಾಗಲು ಮುಂದಾದ ವಿಜಯ್ ಕುಮಾರ್ಗೆ ಭರ್ಜಿಯಿಂದ ಚುಚ್ಚಲಾಗಿತ್ತು. ಇದರಿಂದ ಗಾಯಗೊಂಡಿದ್ದ ವಿಜಯ್ ಕುಮಾರ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನಷ್ಟು ಶಿವಮೊಗ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ