ಶಿವಮೊಗ್ಗ, ನ.22: ಖಾಸಗಿ ಶಾಲೆ(Private School)ಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ(Shivamogga)ದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ಲೋಕೇಶ್ ಎಂಬುವವರು, 10ನೇ ತರಗತಿ ವಿದ್ಯಾರ್ಥಿ ಧನುಷ್ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿ ಕಾಲು, ತೊಡೆ, ಬೆನ್ನಿಗೆ ಬಾಸುಂಡೆ ಬಂದಿದೆ. ಗಾಯಾಳು ವಿದ್ಯಾರ್ಥಿಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನವೆಂಬರ್ 18ರಂದು ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಇತ್ತು. ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತುಗಳ ಪ್ರದರ್ಶನ ಮಾಡಿದ್ದರು. ಈ ವೇಳೆ ಹಲ್ಲೆಗೊಳಗಾದ ವಿದ್ಯಾರ್ಥಿ ತಾಯಿ ಬಂದಿದ್ದರು. ತಾಯಿ ಬಳಿ ಇದ್ದ ಮೊಬೈಲ್ ಪಡೆದು ಧನುಷ್, ತಾನು ತಯಾರಿಸಿದ್ದ ಮಾಡೆಲ್ಗಳನ್ನು ಚಿತ್ರೀಕರಣ ಮಾಡಿದ್ದ. ಈ ವಿಚಾರಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕ ಲೋಕೇಶ್ ಹಲ್ಲೆ ನಡೆಸಿದ್ದರು. ಹಲ್ಲೆ ವಿಚಾರ ತಿಳಿದು ಪೋಷಕರು, ಶಿಕ್ಷಕ ಲೋಕೇಶ್ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಪೋಷಕರ ಮೇಲೆಯೇ ದರ್ಪ ತೋರಿದ್ದ. ಶಿಕ್ಷಕನ ನಡೆ ಖಂಡಿಸಿ ಪೋಷಕರು ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಶಾಲಾ ಮಂಡಳಿ ಭರವಸೆ ನೀಡಿತ್ತು. ಇಷ್ಟಾದರೂ ಕೇಳದ ಪೋಷಕರು, ಶಿಕ್ಷಕನ ವಿರುದ್ಧ ವಿನೋಬನಗರ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ:ಅಮೆರಿಕದ ಜಿಮ್ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ
ಈ ಘಟನೆ ಕುರಿತು ಧನುಷ್ ತಂದೆಗೆ ತಾಯಿ ಮಾಹಿತಿ ನೀಡಿದ್ದರು. ಶಾಲೆಗೆ ಹೋಗಿ ಧನುಷ್ ತಾಯಿ ಮೊಬೈಲ್ ವಾಪಸ್ ಪಡೆದುಕೊಂಡ ತಂದೆ ಗಿರೀಶ್,
ಶಿಕ್ಷಕರ ಹಲ್ಲೆಯಿಂದ ಬಳಲುತ್ತಿದ್ದ ಮಗನಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದಾರೆ. ಮಗನ ಮೇಲಿನ ಹಲ್ಲೆಗೆ ಪೋಷಕರ ಮತ್ತು ಪೋಷಕರ ಸ್ನೇಹಿತರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಹಲ್ಲೆ ಮಾಡಿದ ಶಿಕ್ಷಕರ ಮತ್ತು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮಕ್ಕೆ ಪೋಷಕರ ಪಟ್ಟು ಹಿಡಿದಿದ್ದಾರೆ. ಹಲ್ಲೆ ಮಾಡಿದ ಶಿಕ್ಷಣ ಲೋಕೇಶ್ಗೆ ಪೋಷಕರು ಮತ್ತು ಅವರ ಸ್ನೇಹಿತರು ತರಾಟೆ ತೆಗೆದುಕೊಂಡ ಬಳಿಕ ವಿನೋಬ ನಗರ ಪೊಲೀಸ್ ಠಾಣೆ ಪೊಲೀಸರು ಆಗಮಿಸಿ, ಶಿಕ್ಷಕ ಲೋಕೇಶ್ನನ್ನು ಕರೆದುಕೊಂಡ ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ