ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಪೊಲೀಸರು (Shikaripur Police) 10 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಅಲ್ಲದೇ ಧರಣಿ ವೇಳೆ ಗಲಾಟೆ ಆಗುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಈ ವಿಷಯ ಶಿಕಾರಿಪುರ ಪೊಲೀಸರಿಗೆ ತಿಳಿದಿದ್ದರೂ, ಪ್ರತಿಭಟನೆಯನ್ನು ಹಗುರವಾಗಿ ಪರಿಗಣಿಸಿದ್ದು, ಮತ್ತು ನಿರ್ಲಕ್ಷ್ಯದಿಂದ ಕಲ್ಲುತೂರಾಟ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಾ.27 ರಂದು ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ (bs Yediyurappa) ಅವರ ಮೈತ್ರಿ ನಿವಾಸದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿ, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದರು. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಗಿತ್ತು. ಶಿಕಾರಿಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮುಂದುವರೆದಿತ್ತು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ರವಾನೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಹಶೀಲ್ದಾರ್ ವಿಶ್ವನಾಥ್ರಿಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ: ಮೀಸಲಾತಿ: ಶ್ರೀಗಳಿಗೆ 25 ಬಾರಿ ಕರೆ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ: ಡಿಕೆ ಶಿವಕುಮಾರ್ ಸ್ಫೋಟಕ ಆರೋಪ
ಸಿಎಂ ಬೊಮ್ಮಾಯಿ ಸಚಿವ ಸಂಪುಟದಲ್ಲೇ ಒಳ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತವಾಗಲು ಆರಂಭವಾಗಿತ್ತು. ಒಳಮೀಸಲಾತಿ ನೀಡುವುದನ್ನು ಆಕ್ಷೇಪಿಸಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಸಚಿವ ಪ್ರಭು ಚವ್ಹಾಣ್ ಅವರು ಪತ್ರ ಬರೆದು, ನ್ಯಾ. ಸದಾಶಿವ ಆಯೋಗ ವರದಿ ಮತ್ತು 2004ರ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಉನ್ನತ ಪೀಠವನ್ನು ರಚಿಸಿ ಪರಾಮರ್ಶಿಸಬೇಕು ಎಂದು ಆಗ್ರಹ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:08 pm, Mon, 27 March 23