Shikaripura violence: ಶಿಕಾರಿಪುರ ಹಿಂಸಾಚಾರ; ಮೂವರ ಬಂಧನ, ಮುಂದುವರಿದ ಪ್ರತಿಭಟನೆ
ಬಂಜಾರ ಸಮುದಾಯದವರು ಶಿವಮೊಗ್ಗದ ಶಿಕಾರಿಪುರದಲ್ಲಿ ಒಳ ಮೀಸಲಾತಿ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬಂಜಾರ ಸಮುದಾಯದವರು ಶಿವಮೊಗ್ಗದ ಶಿಕಾರಿಪುರದಲ್ಲಿ ಒಳ ಮೀಸಲಾತಿ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರಕ್ಕೆ (Shikaripura violence) ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಜಿಕೆ ಮಿಥುನ್ ಕುಮಾರ್ ‘ನ್ಯೂಸ್ 9’ಗೆ ಮಾಹಿತಿ ಖಚಿತಪಡಿಸಿದ್ದಾರೆ. ಆರೋಪಿಗಳನ್ನು ರಾಘವೇಂದ್ರ, ಪುನೀತ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದ್ದು ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 (ಸರ್ಕಾರಿ ಕರ್ತವ್ಯವಕ್ಕೆ ಅಡ್ಡಿಪಡಿಸಲು ಕ್ರಿಮಿನಲ್ ಬಲದ ಆಕ್ರಮಣ ಅಥವಾ ಬಳಕೆ), ಹಾಗೂ ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಸಿಬ್ಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.
ಈ ಮಧ್ಯೆ, ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ಬಂಜಾರ, ಕೊರಚ, ಭೋವಿ ಹಾಗೂ ಕೊರಮ ಸಮುದಾಯಗಳ ಜನರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ
ಯಡಿಯೂರಪ್ಪ ಅವರು ಪ್ರತಿಭಟನಾಕಾರರನ್ನು ಬಂಧಿಸದಂತೆ ಕೇಳಿಕೊಂಡಿದ್ದಾರೆ. ಆದರೆ, ಘಟನೆಯಲ್ಲಿ ಕೆಲ ಪೊಲೀಸರಿಗೂ ಗಾಯಗಳಾಗಿವೆ. ಕೆಲವರ ತಲೆಗೆ ಗಾಯಗಳಾಗಿವೆ. ಹೀಗಾಗಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಕೆಲವು ಕ್ರಿಮಿನಲ್ ವಿಚಾರಗಳು ಘಟನೆ ಹಿಂದೆ ಶಾಮೀಲಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದರು.
ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಶಿಷ್ಟ ಜಾತಿಗೆ (ಎಸ್‌ಸಿ) ಒಳಮೀಸಲಾತಿ ನೀಡಿರುವುದನ್ನು ವಿರೋಧಿಸಿ ಸೋಮವಾರ ಬಂಜಾರ, ಕೊರಚ, ಭೋವಿ ಮತ್ತು ಕೊರಮ ಸಮುದಾಯಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಶಿಕಾರಿಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು, ಯಡಿಯೂರಪ್ಪ ಅಥವಾ ಅವರ ಪುತ್ರ ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ ಮಾಡಬೇಕು. ಅವರು ನಮಗೆ ಭರವಸೆ ನೀಡಬೇಕು ಎಂಬ ಆಗ್ರಹ ಮುಂದಿಟ್ಟಿದ್ದರು.
ಪ್ರತಿಭಟನೆ ಮುಂದುವರೆದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಮತ್ತು ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದರಿಂದ ಕೆರಳಿದ ಕೆಲವು ಪ್ರತಿಭಟನಾಕಾರರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದರು ಮತ್ತು ಕೆಲವು ಕಿಟಕಿ ಗಾಜುಗಳನ್ನು ಹಾನಿಗೊಳಿಸಿದ್ದರು. ನಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Tue, 28 March 23