ಬೆಂಗಳೂರು ಆಯ್ತು ಈಗ ಶಿವಮೊಗ್ಗ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್

| Updated By: ಆಯೇಷಾ ಬಾನು

Updated on: Dec 28, 2023 | 1:12 PM

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೆ ಶಿವಮೊಗ್ಗದಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿದೆ. ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದೆ.

ಬೆಂಗಳೂರು ಆಯ್ತು ಈಗ ಶಿವಮೊಗ್ಗ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್
ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್
Follow us on

ಶಿವಮೊಗ್ಗ, ಡಿ.28: ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ (Andrahalli Government School) ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದಿದ್ದು ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಈ ಪ್ರಕರಣ ರಾಜಕೀಯ ತಿರುವು ಪಡೆದು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಸಿದ್ಧರಾಮಯ್ಯ (Siddaramaiah) ಕ್ರಮಕ್ಕೆ ಸೂಚಿಸಿದ್ದರು. ಆದರೆ ಇದೀಗ ಇದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿದೆ. ಅದರಲ್ಲೂ ಶಿಕ್ಷಣ ಸಚಿವರ (Madhu Bangarappa) ತವರು ಜಿಲ್ಲೆಯಲ್ಲೇ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೆ ಶಿವಮೊಗ್ಗದಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿದೆ. ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ ಗ್ರಾ.ಪಂಚಾಯಿತಿಯ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದೆ. ಮಕ್ಕಳನ್ನು ದುರ್ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸಂಘಟನೆ ಮತ್ತು ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನಿಂಗ್: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಜ್ಯದಲ್ಲಿ ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿರುವ ಅನೇಕ ಘಟನೆಗಳು ಹೊರ ಬರುತ್ತಿವೆ. ಈ ಹಿಂದೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಲಾಗಿದ್ದು ಅಮಾನವೀಯ ಘಟನೆ ನಡೆದಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದೆಲ್ಲೆಡೆ ಭಾರೀ ಚರ್ಚೆ ಶುರುವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ ಈಗ ಇದೇ ರೀತಿಯ ಘಟನೆ ಮರುಕಳಿಸಿದೆ. ಶಿವಮೊಗ್ಗದ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡಿದ ವಿಡಿಯೋ ಹರಿದಾಡುತ್ತಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಯನ್ನು ತಡೆಯಲಾಗುತ್ತಿಲ್ಲ.

ವರದಿ ನೋಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ

ಇನ್ನು ಘಟನೆ ಸಂಬಂಧ ಟಿವಿ9ಗೆ ಶಿವಮೊಗ್ಗ ಡಿಡಿಪಿಐ ಪರಮೇಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಭದ್ರಾವತಿ ತಾಲೂಕಿನ ಗುಡ್ಡದನೆರಲೆಕೇರೆ ಗ್ರಾಮದಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆಗೊಳಿಸಲಾಗಿದೆ. ಪ್ರಕರಣ ನನ್ನ ಗಮನಕ್ಕೆ ಬಂದಿದೆ. ನಿನ್ನೆ ಅಧಿಕಾರಿಗಳನ್ನ ಕಳುಹಿಸಿದ್ದೆ, ಪರಿಶೀಲನೆ ನಡೆಸಿದ್ದಾರೆ. ಸತ್ಯಾಸತ್ಯತೆ ಏನು ಎಂಬುದರ ಕುರಿತು ವರದಿ ನೀಡಲು ಬಿಇಓ ಗೆ ಹೇಳಿದ್ದೇನೆ. ವರದಿ ನೋಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:45 am, Thu, 28 December 23