ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನಿಂಗ್: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯನವರು ಇಂತಹ ಕೃತ್ಯಗಳು ಬೇರೆ ಶಾಲೆಗಳಲ್ಲಿ ನಡೆಯುತ್ತಿದ್ದರೆ ಅವುಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು, ಡಿ.23: ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಶಾಲೆಯಲ್ಲಿ ಓದೋಕೆ ಬಂದ ಮಕ್ಕಳ ಕೈಯಲ್ಲಿ ಶಿಕ್ಷಕರು ಶೌಚಾಲಯ ಕ್ಲೀನ್ ಮಾಡಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೋಲಾರದ ಪ್ರಕರಣ ಮಾಸುವ ಮುನ್ನವೇ, ರಾಜ್ಯ ರಾಜಧಾನಿ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ (Government School) ಮಕ್ಕಳಿಂದ ಟಾಯ್ಲೆಟ್ ಕ್ಲೀನ್ (Students Toilet Cleaning) ಮಾಡಿಸೋದು, ಶಿಕ್ಷಕರ (Teacher) ಎಂಚಲು ತಟ್ಟೆ ತೊಳಿಸುವಂತಹ ಘಟನೆ ನಡೆದಿದೆ. ಮಕ್ಕಳು ಶೌಚಾಲಯ ತೊಳೆಯುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ರಾಜ್ಯದಲ್ಲಿ ನಾನಾ ಚರ್ಚೆಗಳು ಆರಂಭವಾಗಿದೆ. ಪೋಷಕರು ಸಿಡಿದೆದ್ದಿದ್ದಾರೆ. ಸದ್ಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯನವರು (Siddaramaiah) ಇಂತಹ ಕೃತ್ಯಗಳು ಬೇರೆ ಶಾಲೆಗಳಲ್ಲಿ ನಡೆಯುತ್ತಿದ್ದರೆ ಅವುಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಕೆಂಡಕಾರಿದ್ದಾರೆ. ಈ ಬಗ್ಗೆ ಎಕ್ಸ್(ಟ್ವಿಟರ್)ನಲ್ಲಿ ಟ್ವೀಟ್ ಮಾಡಿರುವ ಅವರು, ಶಾಲೆಯ ಶೌಚಾಲಯಗಳನ್ನು ಶುಚಿಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವುದು ಅತ್ಯಂತ ಹೀನ ಕೃತ್ಯ. ಇತ್ತೀಚೆಗೆ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯ ಇಲ್ಲ.
ಈಗಾಗಲೇ ವರದಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಂಡಿದ್ದಾರೆ. ಇಂತಹ ಕೃತ್ಯಗಳು ಬೇರೆ ಶಾಲೆಗಳಲ್ಲಿ ನಡೆಯುತ್ತಿದ್ದರೆ ಅವುಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದೇನೆ. ಶಾಲೆ-ಕಾಲೇಜುಗಳ ಹಾಸ್ಟೆಲ್‌ಗಳಲ್ಲಿಯೂ ಈ ಬಗ್ಗೆ ನಿಗಾವಹಿಸುವಂತೆ ಸಮಾಜ ಕಲ್ಯಾಣ ಸಚಿವರಿಗೂ ತಿಳಿಸಿದ್ದೇನೆ.
ಇದನ್ನೂ ಓದಿ: ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್
ಪ್ರತಿಯೊಂದು ಶಾಲೆಯಲ್ಲಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರಬೇಕು ಮತ್ತು ಅವುಗಳನ್ನು ಪ್ರತಿದಿನ ಶುಚಿಗೊಳಿಸಲು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಈ ಬಗ್ಗೆ ಒಂದು ಸಮೀಕ್ಷೆ ನಡೆಸಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ವರದಿ ತರಿಸುವಂತೆ ಪ್ರಾಥಮಿಕ ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ಶಾಲೆಯ ಶೌಚಾಲಯಗಳನ್ನು ಶುಚಿಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವುದು ಅತ್ಯಂತ ಹೀನ ಕೃತ್ಯ. ಇತ್ತೀಚೆಗೆ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯ ಇಲ್ಲ.
ಈಗಾಗಲೇ ವರದಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಂಡಿದ್ದಾರೆ. ಇಂತಹ ಕೃತ್ಯಗಳು…
— CM of Karnataka (@CMofKarnataka) December 23, 2023
ಇನ್ನು ಸಿಎಂ ಸಿದ್ದರಾಮಯ್ಯನವರು, ಪ್ರತಿಯೊಂದು ಶಾಲೆಯಲ್ಲಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರಬೇಕು ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ. ಜೊತೆಗೆ ಪ್ರತಿದಿನ ಶೌಚಾಲಯ ಶುಚಿಗೊಳಿಸಲು ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:59 pm, Sat, 23 December 23