ವಿಜಯನಗರ/ಕೊಪ್ಪಳ, (ಅಕ್ಟೋಬರ್ 22): ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಗ್ಯಾಂಗ್ ರೀತಿಯಲ್ಲೇ ಮತ್ತೊಂದು ಟಿಕೆಟ್ ದೋಖಾ ಬೆಳಕಿಗೆ ಬಂದಿದಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಎನ್ನುವರಿಗೆ ಬರೋಬ್ಬರಿ ಎರಡೂವರೆ ಕೋಟಿ ಪಂಗನಾಮ ಹಾಕಿದ್ದಾರೆ. ಹಗರಿಬೊಮ್ಮನಹಳ್ಳಿ ವಿಧಾನಸಭೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ್ದು, ಈ ಬಗ್ಗೆ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಈ ಬಗ್ಗೆ ವಂಚನೆಗೊಳಗಾದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೋಸದ ಜಾಲವನ್ನು ಬಿಚ್ಚಿಟ್ಟಿದ್ದಾರೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ಗಾಗಿ ನಾನು ಹಣ ಕೊಟ್ಟಿದ್ದೆ. ಬಳಿಕ ಟಿಕೆಟ್ ಕೈತಪ್ಪಿದಾಗ ಹಣ ವಾಪಸ್ ಕೇಳಿದ್ದೆ. ಇಂದು ನಾಳೆ ಎನ್ನುತ್ತಾ ಸುಮಾರು ಮೂರು ತಿಂಗಳ ಕಾಲ ದೂಡಿದರು. ಆದರೆ ಕಳೆದ ಎರಡು ತಿಂಗಳಿಂದ ನನ್ನ ಫೋನ್ ಕರೆ ಸ್ವೀಕರಿಸುತ್ತಿಲ್ಲ. ನನ್ನ ಸಹೋದರನ ಸ್ನೇಹಿತರು ಮಾತನಾಡಿದ ಬಳಿಕ ಚೆಕ್ ಕೊಟ್ಟರು. ಅವರು ಕೊಟ್ಟಿರುವ ಎರಡು ಚೆಕ್ಗಳು ಕೂಡ ಈಗ ಬೌನ್ಸ್ ಆಗಿವೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದೇನೆ. ಇದೀಗ ನಾನೇ ಅವರ ಮೇಲೆ ಹಲ್ಲೆ ಮಾಡಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿದ ಮತ್ತೊಂದು ಪ್ರಕರಣ ಬೆಳಕಿಗೆ!
ನನ್ನ ಸ್ನೇಹಿತರ ಮೂಲಕ ರೆವಣಸಿದ್ದಪ್ಪ,ಅರ್ಜುನ್ ಪರಿಚಯ ಆಗಿದ್ದರು. ಅವರು ಬೆಂಗಳೂರಿಗೆ ಕರೆದುಕೊಂಡು ಹೋಗಿ ಶೇಖರ್ ಪರಿಚಯ ಮಾಡಿಸಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಹಂತ ಹಂತವಾಗಿ ಮೂವರು 2 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದರು. ಶ್ರೀರಾಮುಲು, ಬಸವರಾಜ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದೆ ನಾನು ಎಂದು ರೇವಣ ಸಿದ್ದಪ್ಪ ಹೇಳಿ ನಂಬಿಸಿದ್ದ. ನನ್ನ ಬೆಂಬಲ ಇಲ್ಲದೇ ಶ್ರೀರಾಮುಲ ಇಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಆಗುತ್ತಿರಲಿಲ್ಲ ಎಂದಿದ್ದ . ಟಿಕೆಟ್ ಕೈತಪ್ಪಿದಾಗಲೇ ಮೋಸ ಹೋಗಿದ್ದು ಗೊತ್ತಾಗಿತ್ತು. ಅಲ್ಲಿಂದ ಹಣ ಕೊಡುತ್ತೇನೆ ಎಂದು ಸಾತಯಿಸಿದ್ರು. ಹೀಗಾಗೇ ನಾನು ದೂರು ನೀಡಿದ್ದೇನೆ ಎಂದು ಮೋಸಗಾರರ ವಂಚನೆ ಜಾಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ಥಳೀಯ ಮುಖಂಡರು ಮಾಡಿದ ಮಹಾ ಮೋಸಕ್ಕೆ ಬಿಜೆಪಿಯ ದೊಡ್ಡ ನಾಯಕರು ತಲೆತಗ್ಗಿಸುವಂತಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ