ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ: ವಂಚನೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ. ಸದ್ಯ ವಂಚನೆಗೊಳಗಾದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಪ್ರತಿಕ್ರಿಯೆ ನೀಡಿದ್ದು, ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ಗಾಗಿ ನಾನು ಹಣ ಕೊಟ್ಟಿದ್ದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದಿದ್ದಾರೆ.
ವಿಜಯನಗರ, ಅಕ್ಟೋಬರ್ 22: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ಗಾಗಿ ನಾನು ಹಣ ಕೊಟ್ಟಿದ್ದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ನನಗೆ ಮೋಸ (Fraud) ಮಾಡಿದ್ದಾರೆ ಎಂದು ವಂಚನೆಗೊಳಗಾದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನಾಳೆ ಎನ್ನುತ್ತಾ ಸುಮಾರು ಮೂರು ತಿಂಗಳ ಕಾಲ ದೂಡಿದರು. ಆದರೆ ಕಳೆದ ಎರಡು ತಿಂಗಳಿಂದ ನನ್ನ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ.
ನನ್ನ ಸಹೋದರನ ಸ್ನೇಹಿತರು ಮಾತನಾಡಿದ ಬಳಿಕ ಎರಡು ಚೆಕ್ ಕೊಟ್ಟಿದ್ದು, ಈಗ ಅವು ಬೌನ್ಸ್ ಆಗಿವೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದೇನೆ. ನಾನೇ ಹಲ್ಲೆ ಮಾಡಿದ್ದೇನೆಂದು ಅವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಟಿಕೆಟ್ ವಂಚನೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು: ಸಚಿವ ಹೆಚ್.ಕೆ.ಪಾಟೀಲ್
ಈ ವಂಚನೆ ಆರೋಪ ಬಗ್ಗೆ ಚಿತ್ರದುರ್ಗದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದು, ಟಿಕೆಟ್ ವಂಚನೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಬಿಜೆಪಿಯವರು ಮೊದಲು ಪಕ್ಷದಿಂದ ನೈತಿಕವಾಗಿ ಕ್ರಮಕೈಗೊಳ್ಳಲಿ. ಪ್ರಧಾನಮಂತ್ರಿ ಆದವರೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೊಟ್ಯಂತರ ರೂ. ವಂಚಿಸಿದ ಮತ್ತೊಂದು ಪ್ರಕರಣ ಬೆಳಕಿಗೆ!
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಎಲ್ಲಾ ಆಶ್ವಾಸನೆ ನೀಡಿ ವಚನ ಭ್ರಷ್ಟರಾಗಿದ್ದಾರೆ. ನಾವು ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ 4 ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಕಿಡಿಕಾರಿದ್ದಾರೆ.
ಜನರ ದಿಕ್ಕುತಪ್ಪಿಸುವ ಹೇಳಿಕೆ ಶೋಭೆ ತರಲ್ಲ
ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಅಧಿವೇಶನಲ್ಲಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಸಿಎಂ ಆಗಿದ್ದವರು ಜನರ ದಿಕ್ಕುತಪ್ಪಿಸುವ ಹೇಳಿಕೆ ಶೋಭೆ ತರಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಕಾರ್ಕಳದ ಪರಶುರಾಮ ಪ್ರತಿಮೆ ವಿವಾದ; ಕಾಂಗ್ರೆಸ್, ಬಿಜೆಪಿ ವಿರುದ್ಧ ಪ್ರಕರಣ ದಾಖಲು
ಹಿಂದೂ ಸಂಘಟನೆಗಳಲ್ಲಿ ಗುರಿತಿಸಿಕೊಂಡ ಚೈತ್ರಾ ಸೇರಿದಂತೆ ಹಲವರ ಬಂಧನವಾಗಿದೆ. ಇದರ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಮತ್ತೊಂದು ಇದೇ ಮಾದರಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ 2.55 ಕೋಟಿ ರೂಪಾಯಿ ವಂಚನೆ ವಂಚನೆ ಮಾಡಿದ ಪ್ರಕರಣ ಇದೀಗ ಬಯಲಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.