ಜೂನ್ ತಿಂಗಳೊಳಗೆ ಮಂತ್ರಿ ಸ್ಥಾನ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ: ಶಾಸಕ ಸಿ ಪುಟ್ಟರಂಗಶೆಟ್ಟಿ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಹೈಕಮಾಂಡ್ಗೆ ಗೊತ್ತು. ಜೂನ್ ತಿಂಗಳೊಳಗೆ ಮಂತ್ರಿ ಸ್ಥಾನ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಡೆಪ್ಯೂಟಿ ಸ್ಪೀಕರ್ ಸ್ಥಾನ ಕೊಟ್ಟಿದ್ದರು, ಆದರೆ ನಾನೇ ಒಪ್ಪಲಿಲ್ಲ ಎಂದಿದ್ದಾರೆ.

ಚಾಮರಾಜನಗರ, ಅಕ್ಟೋಬರ್ 22: ಜೂನ್ ತಿಂಗಳೊಳಗೆ ಮಂತ್ರಿ ಸ್ಥಾನ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ (C Puttarangashetty) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನ ಕೊಡೋದು ಬಿಡೋದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ ಬಿಟ್ಟದ್ದು. ಡೆಪ್ಯೂಟಿ ಸ್ಪೀಕರ್ ಸ್ಥಾನ ಕೊಟ್ಟಿದ್ದರು, ಆದರೆ ನಾನೇ ಒಪ್ಪಲಿಲ್ಲ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಹೈಕಮಾಂಡ್ಗೆ ಗೊತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಾಗಿಯೇ ಇಬ್ಬರು ಭಾಗವಹಿಸುತ್ತಿದ್ದಾರೆ. ಭಿನ್ನಾಭಿಪ್ರಾಯ ಎಂಬುವುದು ವಿರೋಧ ಪಕ್ಷಗಳ ಆರೋಪ ಅಷ್ಟೇ ಎಂದು ಹೇಳಿದ್ದಾರೆ.
ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾಂಗ್ರೆಸ್ ಕಚೇರಿ ಮುಂದೆ ಸಾಯ್ತೀನಿ: ಅಭಿಮಾನಿಯ ಪತ್ರ ವೈರಲ್
ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಕಾಂಗ್ರೆಸ್ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಭಿಮಾನಿಯೋರ್ವನ ಇತ್ತೀಚೆಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡನಿಗೆ ಕುರ್ಚಿ ಸಿಕ್ಕಿಲ್ಲವೆಂದು ಗದ್ದಲ: ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲೇ ‘ಕೈ’ ಕುರ್ಚಿ ಗಲಾಟೆ
ಚಾಮರಾಜನಗರ ತಾಲೂಕು ನಲ್ಲೂರುಮೋಳೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸಿ.ಪುಟ್ಟರಂಗಶೆಟ್ಟಿ ಅಭಿಮಾನಿಯಾಗಿರುವ ಚಂದ್ರಶೇಖರ್ ಎನ್ನುವವರು ಪತ್ರ ಬರೆದಿದ್ದು, ಜಿಲ್ಲಾ ಅಥವಾ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕಾರಣ ಎಂದು ಪತ್ರದಲ್ಲಿ ಬರೆದಿದ್ದು, ಆ ಪತ್ರ ವೈರಲ್ ಆಗಿತ್ತು.
ಸೋಲಿಲ್ಲದ ಸರದಾರ ಪುಟ್ಟರಂಗಶೆಟ್ಟಿ
ಚಾಮರಾಜನಗರದಲ್ಲಿ ನಿರಂತರ 4 ಬಾರಿ ಶಾಸಕನಾದ ಮೊದಲಿಗರಾದ ಸಿ.ಪುಟ್ಟರಂಗಶೆಟ್ಟಿ ತಾವು ಸೋಲಿಲ್ಲದ ಸರದಾರ ಎನ್ನುವುದನ್ನು ಸಾಬೀತು ಮಾಡಿದ್ದರು. ಸುಮಾರು ಹತ್ತೊಂಬತ್ತು ಹಂತದಲ್ಲಿ ನಡೆದ ಮತ ಎಣಿಕೆಯಲ್ಲಿ 7,383 ಮತ ಅಂತರದಲ್ಲಿ ಸಿ.ಪುಟ್ಟರಂಗಶೆಟ್ಟಿಗೆ ಜಯ ಸಾಧಿಸಿದ್ದು, ಸಿ.ಪುಟ್ಟರಂಗಶೆಟ್ಟಿ 83,136 ಮತಗಳನ್ನು ಪಡೆದಿದ್ದರೆ, ವಿ.ಸೋಮಣ್ಣ 75,753 ಮತಗಳನ್ನು ಪಡೆದುಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.