ಮಂಗಳೂರು, ಮಾ.11: ಬಿಜೆಪಿ ಹೈಕಮಾಂಡ್ಗೆ ಕರ್ನಾಟಕದಲ್ಲಿ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ದಕ್ಷಿಣ ಕನ್ನಡ, ಮಂಡ್ಯದ ನಂತರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ಗಾಗಿ ಜಿದ್ದಾಜಿದ್ದಿ ನಡೆಯುತ್ತಿದೆ. ಒಂದೆಡೆ, ಕಾರ್ಯಕರ್ತರು ಹಾಲಿ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದು, ಇನ್ನೊಂದೆಡೆ, ತಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಶೋಭಾ ಹೇಳಿದ್ದಾರೆ. ಟಿಕೆಟ್ ಫೈಟ್ ವಿಚಾರವಾಗಿ ಮಾತನಾಡಿದ ಸಿಟಿ ರವಿ (CT Ravi), ಯಾರೇ ಅಭ್ಯರ್ಥಿಯಾದರೂ ಮೋದಿ ಮುಖ ನೋಡಿ ವೋಟ್ ಹಾಕಿ. ಈ ಹಿಂದೆ ಎರಡು ಬಾರಿ ಮೋದಿ ಮುಖ ನೋಡಿಯೇ ಗೆಲ್ಲಿಸಿದ್ದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಬಿಳಿನೆಲೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಪುನರುಚ್ಚರಿಸಿದರು. ಒಂದೆರಡು ದಿನಗಳಲ್ಲಿ ಬಿಜೆಪಿ ಟಿಕೆಟ್ ಘೋಷಣೆಯಾಗಲಿದೆ. ಭಾರತೀಯ ಜನತಾ ಪಾರ್ಟಿಯ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.
ಇದನ್ನೂ ಓದಿ: ಟಿಕೆಟ್ ತಪ್ಪಿಸಲು ಉಡುಪಿ ಚಿಕ್ಕಮಗಳೂರಿನಲ್ಲಿ ಪಿತೂರಿ: ಬೆಳಗಾವಿಯಲ್ಲಿ ಶೋಭಾ ಕರಂದ್ಲಾಜೆ ಗಂಭೀರ ಆರೋಪ
ರಾಜಕೀಯದಲ್ಲಿ ಗೆಲ್ಲುವ ಕ್ಷೇತ್ರವನ್ನು ಎಲ್ಲರೂ ಕೇಳುತ್ತಾರೆ. ಸೀಟು ಕೇಳುವಾಗ ಗೊಂದಲ ಆಗುತ್ತದೆ, ಇದಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ, ಚುನಾವಣಾ ಮಂಡಳಿ ನಿರ್ಧಾರಕ್ಕೆ ಬದ್ಧ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬಹಳ ದೊಡ್ಡ ಪ್ರಮಾಣದಲ್ಲಿ ಎಲ್ಲರ ಕ್ಷೇತ್ರಗಳಲ್ಲಿ ಕೆಲಸ ಆಗಿದೆ. ರಸ್ತೆ, ರೈಲ್ವೇ, ಅಮೃತ ರೈಲ್ವೇ ಯೋಜನೆಗಳು ಜಾರಿಗೆ ಬಂದಿದೆ. ಯಾವುದೇ ಹಳ್ಳಿಗೆ ಹೋದರೂ ಜನ ಅಭಿವೃದ್ಧಿ ಕಂಡಿದ್ದಾರೆ. ಅಭಿವೃದ್ಧಿಯ ಆಧಾರದಲ್ಲಿ ನಾವು ವೋಟ್ ಕೇಳುತ್ತೇವೆ. ಕರ್ನಾಟಕದಲ್ಲಿ ಶೇಕಡಾ 100 ರಷ್ಟು ಸೀಟ್ ಬರುತ್ತದೆ ಅನ್ನೋದು ನಮ್ಮ ವಿಶ್ವಾಸವಾಗಿದೆ. ಮೋದಿಯನ್ನ ಜನ ಪ್ರೀತಿಸುತ್ತಾರೆ, ಮೋದಿಯನ್ನ ಜನ ಗೆಲ್ಲಿಸುತ್ತಾರೆ ಎಂದರು.
ಚಿಕ್ಕಮಗಳೂರಿನ ಪಾಂಚಜನ್ಯ ಕಚೇರಿಯಲ್ಲಿ ನೂತನ ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿಟಿ ರವಿ ಅವರು ಕ್ಷೇತ್ರದ ಟಿಕೆಟ್ ವಿಚಾರವಾಗಿ ನಡೆಯುತ್ತಿರುವ ಜಟಾಪಟಿ ಬಗ್ಗೆ ಮಾತನಾಡಿದರು. ಯಾರು ಅಭ್ಯರ್ಥಿ ಎಂಬುದು ಮುಖ್ಯವಲ್ಲ. ಯಾರೇ ಅಭ್ಯರ್ಥಿ ಆಗಲಿ ಮೋದಿ ಮುಖ ನೋಡಿ ಗೆಲ್ಲಿಸಿ. ಹಿಂದೆ ಎರಡು ಬಾರಿ ಗೆಲ್ಲಿಸಿದ್ದೂ ಮೋದಿ ಮುಖ ನೋಡಿ. ಇದೀಗ ಯಾವುದೇ ರಾಜಿ ಇಲ್ಲದೆ ಮೂರನೇ ಬಾರಿಯೂ ಮೋದಿಯವರ ಮುಖ ನೊಡಿಯೇ ಗೆಲ್ಲಿಸಿ ಎಂದು ಮನವಿ ಮಾಡಿದರು. ಅಲ್ಲದೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಿ. ಒಂದೊಂದು ವೋಟ್, ಒಂದೊಂದ್ದು ಸೀಟು ಬಹಳ ಮುಖ್ಯ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ