ಬೆಂಗಳೂರು, (ಜನವರಿ 24): ರಾಜ್ಯದ ಸರಕಾರಿ ನೌಕರರ ‘ಒಪಿಎಸ್’ ಬೇಡಿಕೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. ಹೊಸ ಪಿಂಚಣಿ(NPS) ಯೋಜನೆಯಿಂದ ಹಳೇ ಪಿಂಚಣಿ (ಒಪಿಎಸ್) ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿ ಆದೇಶ ಹೊರಡಿಸಿದೆ. 2006ರ ಏಪ್ರಿಲ್ಗೆ ಮುನ್ನ ನೇಮಕಗೊಂಡ ಸರ್ಕಾರಿ ನೌಕರರು OPS ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಎಲ್ಲಾ ಸರ್ಕಾರಿ ನೌಕರರಿಗೂ ಸಂಬಂಧಪಟ್ಟಿರುವುದಿಲ್ಲ. ಕೇವಲ ಏಪ್ರಿಲ್ 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏಪ್ರಿಲ್ 2006ರ ಪೂರ್ವದಲ್ಲಿ ಅಧಿ ಸೂಚನೆ ಹೊರಡಿಸಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಒಪ್ಪಿದೆ, ಆದ್ರೆ, ಹಳೆಯ ಪಿಂಚಣಿ ಯೋಜನೆಗೆ ಒಳಪಡಲು ಆರು ಷರತ್ತು ವಿಧಿಸಿದೆ.
ಇನ್ನು 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿದ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, 2006 ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಎಲ್ಲಾ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2006ರ ನಂತರ ನೇಮಕವಾದ ಸರಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಈ ವ್ಯವಸ್ಥೆಯಿಂದ ಸರಕಾರಿ ನೌಕರರು ನಿವೃತ್ತಿ ಸಂದರ್ಭದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಬರಿಗೈಯಲ್ಲಿ ಮನೆಗೆ ಹೋಗಬೇಕಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ನೂತನ ಪಿಂಚಣಿ ವ್ಯವಸ್ಥೆ ರದ್ದಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಿದ್ದರು. ಬೀದರ್‌ನಿಂದ ಚಾಮರಾಜನಗರದವರೆಗಿನ ನಾನಾ ಜಿಲ್ಲೆಗಳ 20 ಸಾವಿರಕ್ಕೂ ಅಧಿಕ ಸರಕಾರಿ ನೌಕರರು ‘ನಿಶ್ಚಿತ ಪೆನ್ಷನ್ ಸ್ಕೀಮ್ ನಮ್ಮ ಹಕ್ಕು’ ಎಂಬ ಟಿ-ಶರ್ಟ್ ಧರಿಸಿ ಹೋರಾಟಕ್ಕಿಳಿದಿದ್ದರು.
ಎನ್‌ಪಿಎಸ್ ರದ್ದುಗೊಳಿಸುವಂತೆ ಆಗ್ರಹಿಸಿ ನಾನಾ ಜಿಲ್ಲೆಗಳಿಂದ ಸರಕಾರಿ ನೌಕರರು ತಮ್ಮ ಕುಟುಂಬಸ್ಥರು, ಸಣ್ಣ ಸಣ್ಣ ಮಕ್ಕಳ ಜತೆ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದ್ದರು. ಮಹಾರಾಣಿ ಕಾಲೇಜಿನಿಂದ ಮೆಜೆಸ್ಟಿಕ್ ಕಡೆಗೆ ತೆರಳುವ ರಸ್ತೆಯನ್ನು ಬಂದ್ ಮಾಡಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು. ಅಲ್ಲದೇ ಪ್ರತಿಭಟನಾನಿರತ ಸರಕಾರಿ ನೌಕರರು ತಮ್ಮ ಕುಟುಂಬ ಸದಸ್ಯರು, ಮಕ್ಕಳೊಂದಿಗೆ ರಸ್ತೆಯಲ್ಲೇ ಕುಳಿತು ಮನೆಯಿಂದ ತಂದಿದ್ದ ಊಟ ಸೇವಿಸಿ ಆಕ್ರೋಶ ಹೊರಹಾಕಿದ್ದರು.
“ಸರಕಾರಿ ನೌಕರರು ‘ವೋಟ್ ಫಾರ್ ಒಪಿಎಸ್’ ಅಭಿಯಾನ ಹಮ್ಮಿಕೊಂಡಿದ್ದರು. ಯಾವ ಪಕ್ಷ ಎನ್‌ಪಿಎಸ್ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡಲಿದೆಯೋ ಆ ಪಕ್ಷಕ್ಕೆ ನಮ್ಮ ಮತ ನೀಡುತ್ತೇವೆ ಎಂದು ವಿಧಾನಸಭೆ ಚುನಾವಣೆಯಲ್ಲಿ ಹೇಳಿದ್ದರು. ಸರಕಾರಿ ನೌಕರರು ಮತ್ತು ಅವರ ಕುಟುಂಬಸ್ಥರು, ಸ್ನೇಹಿತರು ಸೇರಿ ರಾಜ್ಯದಲ್ಲಿ 75 ಲಕ್ಷ ಮತಗಳಿವೆ,” ಎಂದು ಸಂಘದ ಅಧ್ಯಕ್ಷ ಶಾಂತಾರಾಮ ಹೇಳಿದ್ದರು.
ಇನ್ನು ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ರಾಜ್ಯ ಸರ್ಕಾರಿ ನೌಕರರ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿ ಬಂದಿದ್ದರು. ಇದೀಗ ಆ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದುಕೊಂಡಿದ್ದಾರೆ.
Published On - 10:18 pm, Wed, 24 January 24