ಬೆಂಗಳೂರು: ಕೊವಿಡ್ ಪರಿಕರ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸರ್ಕಾರದ ವಿರುದ್ಧ ಆರೋಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ವಾಕ್ಪ್ರಹಾರ ಮತ್ತಷ್ಟು ತೀಕ್ಷ್ಣಗೊಳಿಸಿದರು.
ಕೇಂದ್ರ ಸರ್ಕಾರ PM Cares Fund ನಿಂದ ಇಡೀ ದೇಶಕ್ಕೆ 50,000 ವೆಂಟಿಲೇಟರ್ ಪೂರೈಕೆ ಮಾಡಿದ್ದಾರೆ. ಸುಮಾರು 2,000 ಕೋಟಿ ರೂಪಾಯಿ ವೆಚ್ಚದಲ್ಲಿ ನೀಡಿದ್ದಾರೆ. ಹೀಗಾಗಿ, ಒಂದೊಂದು ವೆಂಟಿಲೇಟರ್ಗೆ 4 ಲಕ್ಷ ರೂಪಾಯಿ ವೆಚ್ಚ ತಗಲಿದೆ. ಜೊತೆಗೆ, ನೆರೆಯ ತಮಿಳುನಾಡು ಸರ್ಕಾರ 100 ವೆಂಟಿಲೇಟರ್ ಖರೀದಿಸಿದ್ದು ಒಂದು ವೆಂಟಿಲೇಟರ್ಗೆ 4,78,000 ರೂಪಾಯಿ ನೀಡಿದ್ದಾರೆ.
‘ಇದನ್ನ ಭ್ರಷ್ಟಾಚಾರದ ಸುವಾಸನೆ ಅಂತಾ ಕರಿಯಬೇಕಾ?’ ಆದರೆ ನಮ್ಮ ರಾಜ್ಯದವರು ಏಪ್ರಿಲ್ನಲ್ಲಿ 5.6 ಲಕ್ಷ ರೂಪಾಯಿ ಹಾಗೂ ಮತ್ತೊಂದು ಸಲ 12.32 ಲಕ್ಷ ರೂಪಾಯಿ ಕೊಟ್ಟು ವೆಂಟಿಲೇಟರ್ ಖರೀದಿ ಮಾಡಿದ್ದಾರೆ. ಜೊತೆಗೆ, ಮಾರ್ಚ್ 23ರಂದು 18.20 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿ ನಾವು ವೆಂಟಿಲೇಟರ್ ಖರೀದಿಯು ಪಾರದರ್ಶಕವಾಗಿ ನಡೆದಿದೆ ಅಂತಾ ಹೇಳಬೇಕಾ ಅಥವಾ ಭ್ರಷ್ಟಾಚಾರದ ಸುವಾಸನೆ ಅಂತಾ ಕರಿಯಬೇಕಾ ಎಂದು ಸಿದ್ದರಾಮಯ್ಯ ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವರ ಪ್ರಕಾರ 9.65 ಲಕ್ಷ PPE ಕಿಟ್ಗಳನ್ನು ಸರ್ಕಾರ ಖರೀದಿ ಮಾಡಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 330 ರೂಪಾಯಿ. ಜೊತೆಗೆ, ಮಹಾರಾಷ್ಟ್ರದ ಸಂಸ್ಥೆಯಿಂದ 3 ಲಕ್ಷ PPE ಕಿಟ್ ಖರೀದಿಸಿದ್ರು. ಆದರೆ, ಇವು ಕಳಪೆ ಕಿಟ್ಗಳು ಅಂತಾ ವೈದ್ಯರು ಗಲಾಟೆ ಮಾಡಿದ್ರು. ಹಾಗಾಗಿ, 3 ಲಕ್ಷ ಕಿಟ್ಗಳ ಪೈಕಿ 1 ಲಕ್ಷ ಕಿಟ್ ವಾಪಸ್ ಮಾಡಿದ್ದರು. ಆದರೆ, 330 ರೂ. ಬೆಲೆಯ ಕಿಟ್ಗೆ ಸುಮಾರು 2,000 ರೂ. ಕೊಟ್ಟು ಖರೀದಿ ಮಾಡಿದ್ದಾರೆ. Make in India ಅಂತಾ ಭಾಷಣ ಹೊಡೆಯೋರು ಚೀನಾದಿಂದ 3ಲಕ್ಷ ಕಿಟ್ ಖರೀದಿ ಮಾಡಿದ್ದಾರೆ. ನಮ್ಮ ಸೈನಿಕರನ್ನು ಹೊಡೆದು ಹಾಕಿದ ಚೀನಾದಿಂದ PPE ಕಿಟ್ ಖರೀದಿ ಮಾಡಿದ್ರು ಎಂದು ಸರ್ಕಾರವನ್ನ ಟೀಕಿಸಿದರು.