ವಿಧಾನಸಭೆ: ನಾನೂ ಉತ್ತರ ಕರ್ನಾಟಕದವನೇ ಎಂದ ಸಿದ್ದರಾಮಯ್ಯ, ನಿಮ್ಮ ತಲೆ ಎಲ್ಲಿಗೆ ಗೊತ್ತಿದೆ ಎಂದ ಸೋಮಣ್ಣ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 24, 2021 | 3:08 PM

ನಾನು ಕೂಡ ಉತ್ತರ ಕರ್ನಾಟಕದವನೇ ಎಂದರು ಸಿದ್ದರಾಮಯ್ಯ. ನೀವೇನೂ ಉತ್ತರ ಕರ್ನಾಟಕದವರಲ್ಲ. ನಿಮ್ಮ ತಲೆ ಎಲ್ಲಿದೆ, ಎಲ್ಲಿಗೆ ಹೋಗ್ತೀರಾ ಎಂದು ಗೊತ್ತಿದೆ ಎಂದು ಸೋಮಣ್ಣ ಪ್ರತಿಕ್ರಿಯಿಸಿದರು

ವಿಧಾನಸಭೆ: ನಾನೂ ಉತ್ತರ ಕರ್ನಾಟಕದವನೇ ಎಂದ ಸಿದ್ದರಾಮಯ್ಯ, ನಿಮ್ಮ ತಲೆ ಎಲ್ಲಿಗೆ ಗೊತ್ತಿದೆ ಎಂದ ಸೋಮಣ್ಣ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ವಸತಿ ಸಚಿವ ವಿ.ಸೋಮಣ್ಣ
Follow us on

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯ ಒದಗಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಸದನದಲ್ಲಿ ಪ್ರಮುಖ ಸಚಿವರ ಅನುಪಸ್ಥಿತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಎಲ್ರಿ ಇಲ್ಲಿ ಯಾರು ಇಲ್ವಲ್ಲಾ? ನಿರಾಣಿ ಅವ್ರೇ, ನೀವು ನಮ್ಮ ಭಾಗದವರು, ಎಲ್ಲಿ ನಿಮ್ಮವರು ಎಲ್ಲಾ? ಎಲ್ಲಿ ಹೋಗಿಬಿಟ್ರು ಎಂದು ಪ್ರಶ್ನಿಸಿದರು. ವಿಧಾನಸಭೆ ಏನು ಮಕ್ಕಳ ಆಟನಾ? ನಾವು ಇಲ್ಲಿ ಬುಗರಿ ಆಡೋಕೆ ಬರಬೇಕಾ? ಮಾತನಾಡಲು ನನಗಿನ್ನೂ 2 ಗಂಟೆ ಸಮಯ ಬೇಕು ಎಂದು ಒತ್ತಾಯಿಸಿದರು.

ನಾನು ಇದನ್ನು ಇಲ್ಲಿಗೇ ಬಿಡುವುದಿಲ್ಲ. ಉ‌ತ್ತರ ಕರ್ನಾಟಕ ಸಮಸ್ಯೆಗಳ‌ ಬಗ್ಗೆ ಚರ್ಚೆ ಮಾಡಬೇಕಾ? ಬೇಡವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್, ಈ ವೇಳೆ ಚರ್ಚೆಯಾಗಿ ಏನು ಆಗಬೇಕು? ಏನು ವಿಧೇಯಕ ಆಗಬೇಕಾ? ಇಲ್ಲಿ ವದರಿ ಹೋಗೋದಷ್ಟೇ ತಾನೇ ಎಂದು ಪ್ರತಿಕ್ರಿಯಿಸಿದರು.

ಮಾತು ಶುರು ಮಾಡಿದರೆ ಕೃಷ್ಣಾ ಜಲ ಭಾಗ್ಯ ಅಂತೀರಿ. ಬೇಗ ಮಾತು ಮುಗಿಸಿ ಎಂದ ಸಚಿವ ಸೋವಣ್ಣ ಅವರ ಮಾತಿಗೆ ಸಿದ್ದರಾಮಯ್ಯ ತುಸು ಇರಿಸುಮುರಿಸಾದಂತೆ ಕಂಡುಬಂತು. ಕೃಷ್ಣ ಜಲಭಾಗ್ಯ ನಮ್ಮ ಭಾಗದಲ್ಲೇ ಬರೋದು. ನಾನು ಕೂಡ ಉತ್ತರ ಕರ್ನಾಟಕದವನೇ ಎಂದರು ಸಿದ್ದರಾಮಯ್ಯ. ನೀವೇನೂ ಉತ್ತರ ಕರ್ನಾಟಕದವರಲ್ಲ. ನಿಮ್ಮ ತಲೆ ಎಲ್ಲಿದೆ, ಎಲ್ಲಿಗೆ ಹೋಗ್ತೀರಾ ಎಂದು ಗೊತ್ತಿದೆ ಎಂದು ಸೋಮಣ್ಣ ಪ್ರತಿಕ್ರಿಯಿಸಿದರು. ನೀವು ನಮ್ಮವರೇ, ನಮ್ಮ ಗರಡಿಗೆ ಬರುತ್ತೀರಿ ಎಂದು ಸಿದ್ದರಾಮಯ್ಯ ಹೇಳಿದರು.

ಬೇಗ ಮಾತು ಮುಗಿಸಿ ಸ್ಪೀಕರ್ ಸೂಚನೆ ನೀಡಿದರು. ನಾನು 3 ಗಂಟೆವರೆಗೂ ಮಾತಾಡ್ತೇನೆ, ನನಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಸಿದ್ದರಾಮಯ್ಯನವರ ನಡೆ ಒಳ್ಳೆಯದಲ್ಲ ಎಂದು ಸಚಿವರ ಆಕ್ಷೇಪಿಸಿದರು. ಚರ್ಚೆಗೆ ಅವಕಾಶ ಕೊಡುವಂತೆ ವಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈಗ ಮಧ್ಯಾಹ್ನದ ಊಟಕ್ಕೆ ಸಮಯವಾಗಿದೆ. 3 ಗಂಟೆಯ ನಂತರ ಸಭೆ ಸೇರಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ. ರಾಜ್ಯ ಸರ್ಕಾರ ಉತ್ತರವನ್ನು ನೀಡಲಿ ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು. ಚರ್ಚೆಗೆ ಇನ್ನೂ ಒಂದು ಗಂಟೆ ಬೇಕೆಂದು ಒತ್ತಾಯಿಸಿದ್ದ ಸಿದ್ದರಾಮಯ್ಯ, ಉಮೇಶ್ ಕತ್ತಿ ಮಾತೆತ್ತಿದರೆ ಉತ್ತರ ಕರ್ನಾಟಕ ಎನ್ನುತ್ತಿರುತ್ತೀರಿ. ಈಗೇಕೆ ಸುಮ್ಮನಿದ್ದೀರಿ? ಚರ್ಚೆ ಮಾಡೋದು ಬೇಡ್ವಾ ಎಂದು ಪ್ರಶ್ನಿಸಿದರು.

ನೀರಾವರಿ ನಿಗಮಗಳಿಗೆ ಸರ್ಕಾರ ಅಗತ್ಯ ಪ್ರಮಾಣದ ಹಣ ವಿನಿಯೋಗಿಸುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಬಿಜೆಪಿ ಸರ್ಕಾರವು ನೀರಾವರಿ ನಿಗಮಗಳಿಗೆ ಖರ್ಚು ಮಾಡಿರೋದು ₹ 17,734 ಕೋಟಿ. ನಮ್ಮ 5 ವರ್ಷಗಳ ಆಡಳಿತದಲ್ಲಿ ನಾವು ಖರ್ಚು ಮಾಡಿರುವುದು ₹ 51,217 ಕೋಟಿ. ಮೂರು ವರ್ಷಗಳಲ್ಲಿ ನೀರಾವರಿಗಾಗಿ ನೀವು ಮಾಡಿರುವ ಒಟ್ಟು ವೆಚ್ಚ ₹ 33,835 ಕೋಟಿ. ನೀವು ಕೊಟ್ಟಿದ್ದ ಭರವಸೆಯಂತೆ ಮೂರು ವರ್ಷಗಳಲ್ಲಿ ₹ 90 ಸಾವಿರ ಕೋಟಿ ಖರ್ಚು ಮಾಡಬೇಕಿತ್ತಲ್ಲವೇ? ಏನಾಯಿತು ನಿಮ್ಮ ಪ್ರಾಮೀಸ್? ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ನೀವು ಎಲ್ರೀ ನಡೆದಿದ್ದೀರಿ ಎಂದು ಪ್ರಶ್ನಿಸಿದರು.

ನಮ್ಮನ್ನು ನಿರ್ಗತಿಕರನ್ನಾಗಿಸಿದ್ದು ಕಾಂಗ್ರೆಸ್: ಕಾರಜೋಳ
ನಮ್ಮನ್ನು (ಉತ್ತರ ಕರ್ನಾಟಕದವನ್ನು) ನಿರಾಶ್ರಿತರು, ನಿರ್ಗತಿಕರಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ವಿಧಾನಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ವೇಳೆ ಸಿದ್ದರಾಮಯ್ಯ ಕೇಳಿದ ಅನುದಾನದ ಬಗೆಗಿನ ಪ್ರಶ್ನೆಗೆ ಕಾರಜೋಳ ಮೇಲಿನಂತೆ ಆಕ್ರೋಶ ವ್ಯಕ್ತಪಡಿಸಿದರು. ಕಾರಜೋಳ ಹೇಳಿಕೆಯನ್ನು ಸಿದ್ದರಾಮಯ್ಯ ಒಪ್ಪಲಿಲ್ಲ. ಬಿಜೆಪಿಯವರು ಕೇವಲ ರಾಜಕೀಯ ಭಾಷಣ ಮಾಡುತ್ತಾರೆ. ಬರೀ ಸುಳ್ಳು ಹೇಳುತ್ತಾರೆ ಎಂದು ಸಿದ್ದರಾಮಯ್ಯ ದೂರಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ
ಇದನ್ನೂ ಓದಿ: Karnataka Anti Conversion Bill 2021: ವಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ