AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತು ದಿನ 52 ಗಂಟೆಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ

ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ 5 ಗಂಟೆ ಚರ್ಚೆ ನಡೆದಿದೆ ಎಂದು 15ನೇ ವಿಧಾನಸಭೆಯ 11ನೇ ಕಾರ್ಯಕಲಾಪದ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ ನೀಡಿದ್ದಾರೆ.

ಹತ್ತು ದಿನ 52 ಗಂಟೆಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ
ವಿಶ್ವೇಶ್ವರ ಹೆಗಡೆ ಕಾಗೇರಿ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Dec 24, 2021 | 3:12 PM

ಬೆಳಗಾವಿ: ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕಲಾಪ ಮುಂದೂಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ನೀಡಿದ್ದಾರೆ. 10 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದೆ. ಒಟ್ಟಾರೆ 52 ಗಂಟೆ ಕಾಲ ಕಾರ್ಯ ಕಲಾಪ ನಡೆಸಲಾಗಿದೆ. ಒಟ್ಟು 10 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದೆ. ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಬಗ್ಗೆ ಖಂಡನಾ ನಿರ್ಣಯ ಮಂಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ 5 ಗಂಟೆ ಚರ್ಚೆ ನಡೆದಿದೆ ಎಂದು 15ನೇ ವಿಧಾನಸಭೆಯ 11ನೇ ಕಾರ್ಯಕಲಾಪದ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ ನೀಡಿದ್ದಾರೆ.

ಶಾಸಕರ 1,921 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ. ವಿಧಾನಸಭೆಯಲ್ಲಿ 149 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯ ವೇಳೆಯಲ್ಲಿ 24 ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಪ್ರಶ್ನೋತ್ತರ ಕಲಾಪ ಶೇಕಡಾ 99ರಷ್ಟು ಯಶಸ್ವಿಯಾಗಿದೆ. ಕೊರೊನಾ ಕಾಲದಲ್ಲಿ ಎಲ್ಲರೂ ಸುರಕ್ಷಿತವಾಗಿರುವಂತೆ ಸಲಹೆ ನೀಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಹತ್ತು ದಿನ 52 ಗಂಟೆಗಳ ಕಾಲ ನಡೆದಿದೆ. ಹೆಚ್ಚು ದಿನ ಸದ‌ನ ‌ನಡೆದಂತೆ ಹೆಚ್ಚು ಸದಸ್ಯರಿಗೆ ಮಾತಾಡಲು ಅವಕಾಶ ಸಿಗುತ್ತದೆ. ಹೆಚ್ಚು ಶಾಸಕರಿಗೆ ಅವಕಾಶ ಸಿಕ್ಕಿಲ್ಲ ನಿಜ. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ವಿಚಾರ ಸಿಎಂ ಸಮ್ಮುಖದಲ್ಲಿ ಇದೆ, ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ. ಮತಾಂತರ ‌ನಿಷೇಧ ವಿಧೇಯಕ ಕದ್ದು ಮುಚ್ಚಿ ಮಂಡನೆ ಆಗಿಲ್ಲ. ಹಿಂದಿನ ದಿನ ಬಿಲ್ ಕಾಪಿ ಪ್ರಿಂಟ್ ಆಗಿ ಬಂದಿರಲಿಲ್ಲ, ಹೀಗಾಗಿ ಅಜೆಂಡಾದಲ್ಲಿ ಬೆಳಗ್ಗೆ ಹಾಕಿರಲಿಲ್ಲ. ಬಿಲ್ ಪ್ರಿಂಟ್ ಆಗಿ ಬಂದ ಬಳಿಕ ಪೂರಕ ಅಜೆಂಡಾ ಕಳುಹಿಸಲಾಗಿದೆ. ಅಂದು ಮಧ್ಯಾಹ್ನದ ಬಳಿಕ ವಿಪಕ್ಷದವರು ಸದನಕ್ಕೆ ತಡವಾಗಿ ಬಂದಿದ್ದರು. ವಿಪಕ್ಷ ನಾಯಕರಿಗೆ ಹೇಳಿ ಎಂದು ಮೊದಲೇ ಹೇಳಿ ಕೂಡಾ ಕಳುಹಿಸಲಾಗಿತ್ತು. ವಿಪಕ್ಷದವರು ತಡವಾಗಿ ಸದನಕ್ಕೆ ಬಂದು ಸ್ಪೀಕರ್ ಕದ್ದುಮುಚ್ಚಿ ಮಂಡನೆ ಮಾಡಿದರು ಎಂದು ಹೇಳಿದರೆ ಯಾರು ಎಷ್ಟು ಪ್ರಬುದ್ಧತೆ ಹೊಂದಿದ್ದಾರೆ ಅಂತಾ ಹೇಳೋದು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಒಂದು ವಾರ ಕಲಾಪ ನಡೆಸುವಂತೆ ಶಾಸಕರ ಒತ್ತಾಯ ಕೇಳಿಬಂದಿರುವ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಹೆಚ್ಚು ದಿನ ಕಲಾಪ ನಡೆಸುತ್ತೇವೆ. ಬೆಳಗಾವಿ ಅಧಿವೇಶನಕ್ಕೆ 8 ಶಾಸಕರು ಸಂಪೂರ್ಣ ಗೈರಾಗಿದ್ದರು. ಪೂರ್ವಾನುಮತಿ ಪಡೆದು ಶಾಸಕರು ಗೈರಾಗಿದ್ದರು. ಒಟ್ಟಾರೆ ಶೇಕಡಾ 75ರಷ್ಟು ಶಾಸಕರು ಸದನಕ್ಕೆ ಹಾಜರಾಗಿದ್ದರು. 5 ಸಾವಿರಕ್ಕಿಂತ ಹೆಚ್ಚು ಜನರು ಕಲಾಪ ವೀಕ್ಷಣೆ ಮಾಡಿದ್ದಾರೆ. ಸಂತಸ, ಅಭಿಮಾನ, ಹೆಮ್ಮೆಯಿಂದ ಅಧಿವೇಶನ ಯಶಸ್ವಿ ಆಗಿದೆ. ಸಿಎಂ, ವಿಪಕ್ಷ ನಾಯಕರ ನೇತೃತ್ವದಲ್ಲಿ ಅಧಿವೇಶನ ಯಶಸ್ವಿ ಆಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ಒಟ್ಟಾರೆ 40 ದಿನ ಅಧಿವೇಶನ ನಡೆಸಿದಂತಾಗಿದೆ. 149 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ. ನಿಯಮಾವಳಿ, ಕಾಲ ಮಿತಿಯಿಂದ ಹೆಚ್ಚಿನವರಿಗೆ ಅವಕಾಶ ಸಿಕ್ಕಿಲ್ಲ. ಮುಂದೆ ಹೆಚ್ಚು ದಿನ ಸದನ ನಡೆಸಲು ಸರ್ಕಾರಕ್ಕೆ ತಿಳಿಸುತ್ತೇನೆ ಎಂದು ಸುವರ್ಣಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಶಿಸ್ತು ಕಾಪಾಡಲು ಬಿ.ಎಸ್. ಯಡಿಯೂರಪ್ಪ ಸಲಹೆ ಸ್ವಾಗತಿಸುತ್ತೇನೆ. ಯಡಿಯೂರಪ್ಪನವರು ಹೇಳಿದ್ದನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನಾನು ವಿಧಾನಸಭೆ ಸ್ಪೀಕರ್ ಆಗಿ ಎರಡೂವರೆ ವರ್ಷವಾಗಿದೆ. ಯಡಿಯೂರಪ್ಪ ನೀಡಿರುವ ಸಲಹೆ ಜಾರಿಗೊಳಿಸಲು ಪ್ರಯತ್ನಿಸಿದ್ದೇನೆ. ಶಿಸ್ತು ಮೂಡಿಸುವ ವಾತಾವರಣವನ್ನು ನಾವೆಲ್ಲರೂ ಸೇರಿ ನಿರ್ಮಿಸಬೇಕಾಗುತ್ತದೆ. ಅದು ಎಲ್ಲರ ಸಾಮೂಹಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಬೆಳಗಾವಿಯಲ್ಲಿ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು

ಇದನ್ನೂ ಓದಿ: ಸಂಸತ್​ನ ಚಳಿಗಾಲದ ಅಧಿವೇಶನ ಮುಕ್ತಾಯ: ಅಧಿವೇಶನ ಯಶಸ್ವಿ ಎಂದ ಸರ್ಕಾರ,ಚರ್ಚೆಗಳಿಲ್ಲದೆ ಮಸೂದೆ ಅಂಗೀಕರಿಸಲಾಗಿದೆ ಎಂದ ವಿಪಕ್ಷ