ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

ವಿನಾಶ ಕಾಲೇನ ವಿಪರೀತ ಬುದ್ಧಿ. ಕಾಂಗ್ರೆಸ್​ನ ಇಂದಿನ ವರ್ತನೆ ಅದೊಂದು ಮುಳುಗುವ ಹಡಗು ಎಂಬುದನ್ನು ಸಾಬೀತುಪಡಿಸಿದೆ ಏಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

TV9kannada Web Team

| Edited By: Sushma Chakre

Dec 23, 2021 | 6:26 PM

ಬೆಳಗಾವಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಮುಂದಾಗಿದ್ದರು. ಮಸೂದೆಯನ್ನು ಸಚಿವ ಸಂಪುಟದಲ್ಲಿ ಚರ್ಚೆಗೆ ತರಲೂ ನಿರ್ಧರಿಸಿದ್ದರು. ಆದರೆ ಈಗ ಇತರ ಕಾರಣಗಳಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿ ಈ ಬಿಲ್ ಪಾಸ್ ಮಾಡಿದ್ದೇವೆ. ಮತಾಂತರ ನಿಷೇಧ ಮಸೂದೆಗೆ ಅನುಮೋದನೆ ನೀಡಲು ಇವರೇಕೆ ಹಿಂದುಮುಂದು ನೋಡುತ್ತಿದ್ದಾರೆ ಎಂದು ಸಾವಿರಾರು ಜನ ಸಾಧುಸಂತರು ಪ್ರಶ್ನಿಸಿದ್ದರು. ವಿನಾಶ ಕಾಲೇನ ವಿಪರೀತ ಬುದ್ಧಿ. ಕಾಂಗ್ರೆಸ್​ನ ಇಂದಿನ ವರ್ತನೆ ಅದೊಂದು ಮುಳುಗುವ ಹಡಗು ಎಂಬುದನ್ನು ಸಾಬೀತುಪಡಿಸಿದೆ ಏಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ. ಜನರೂ ಕಾಂಗ್ರೆಸ್ ಪಕ್ಷವನ್ನು ಹರಿದು ಬಿಸಾಕಿದ್ದಾರೆ. ದೇಶದ 26 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಕಾಂಗ್ರೆಸ್​ನ ಅಡ್ರೆಸ್ ಇಲ್ಲ. ರಾಜ್ಯದಲ್ಲಿ ಉಸಿರಾಡುತ್ತಿದ್ದ ಕಾಂಗ್ರೆಸ್ ನಾಯಕರು, ಮಸೂದೆ ವಿರೋಧ ಮಾಡಿ ತಪ್ಪು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ, 140 ಹೆಚ್ಚು ಸೀಟು ಗೆಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಘೋಷಿಸಿದರು.

ಮಸೂದೆ ಅಂಗೀಕಾರಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಅಭಿನಂದನೆ. ಮಠಾಧಿಪತಿಗಳು ಆತಂಕದಲ್ಲಿದ್ದರು. ಬಿಜೆಪಿ ಶಾಸಕರು ಒಂದಾಗಿ ಗಟ್ಟಿಯಾಗಿ ನಿಂತು ಮಸೂದೆಯನ್ನು ಪಾಸ್ ಮಾಡಿಸಿದ್ದೇವೆ. ಯಾರು ಯಾರು ವಿರೋಧ ಮಾಡಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸುವ ಕೆಲಸ ಎಲ್ಲಾ ಸ್ವಾಮಿಗಳು ಮಾಡಬೇಕು ಎಂದು ಕರೆ ನೀಡಿದರು. ನಾವು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮದ ವಿರೋಧಿಗಳಲ್ಲ. ಎಲ್ಲ ಸಮಾಜದವರನ್ನು ಒಂದೇ ತಾಯಿಯ ಮಕ್ಕಳಂತೆ ನೋಡಬೇಕು ಎಂಬುದು ನಮ್ಮ ನಿಲುವು. ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಕಾಂಗ್ರೆಸ್ ಯತ್ನಿಸಿದೆ. ಅದಕ್ಕೆ ಛೀಮಾರಿ ಹಾಕಿಸಿಕೊಂಡು ತಕ್ಕ ಪಾಠ ಕಲಿತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಅವರ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರ ನಡವಳಿಕೆಯನ್ನು ಖಂಡಿಸುತ್ತೇನೆ. ಆರ್​ಎಸ್​ಎಸ್ ಅಜೆಂಡಾ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಆರ್​ಎಸ್​ಎಸ್​, ಪ್ರಧಾನಿಗಳೂ ಆರ್​ಎಸ್​ಎಸ್, ನಾವೆಲ್ಲರೂ ಆರ್​ಎಸ್ಎಸ್ ಹಿನ್ನೆಲೆಯಿಂದ ಬಂದವರು. ಒಂದೇ ತಾಯಿಯ ಮಕ್ಕಳಂತೆ ಬದುಕುವ ಚಿಂತನೆ ನಮ್ಮದು ಎಂದರು.

ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಗೆ ಆರ್​ಎಸ್​ಎಸ್​ ಸಹಕಾರವಿರುವುದು ಸತ್ಯ; ವಿಪಕ್ಷಗಳಿಗೆ ಯಡಿಯೂರಪ್ಪ ಪ್ರತ್ಯುತ್ತರ

Karnataka Assembly Session Live: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

Follow us on

Related Stories

Most Read Stories

Click on your DTH Provider to Add TV9 Kannada