ಮತಾಂತರ ನಿಷೇಧ ಕಾಯ್ದೆ ಆರ್​ಎಸ್​ಎಸ್​ನವರ ಕೂಸು; ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

ಮತಾಂತರ ನಿಷೇಧ ಕಾಯ್ದೆ ಆರ್​ಎಸ್​ಎಸ್​ನವರ ಕೂಸು; ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ
ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಜ್ಯದಲ್ಲಿ ಜ್ವಲಂತ ಸಮಸ್ಯೆ ಸಾಕಷ್ಟಿವೆ, ಅದರ ಬಗ್ಗೆ ಚರ್ಚಿಸಲಿ. ಈ ಕಾಯ್ದೆ ಆರ್​ಎಸ್​ಎಸ್​​ನವರ ಕೂಸು. ಜನರ ಮನಸ್ಸು ಕೆಡಿಸಲು ತಂದಿರುವಂತಹ ಕಾಯ್ದೆ ಇದು ಎಂದು ಮತಾಂತರ ನಿಷೇಧ ಕಾಯ್ದೆ ಕುರಿತು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

TV9kannada Web Team

| Edited By: Sushma Chakre

Dec 23, 2021 | 5:31 PM

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಗೆ ವಿರೋಧ ಪಕ್ಷದಲ್ಲಿ ಮಾತ್ರವಲ್ಲದೆ ಬಿಜೆಪಿಯಲ್ಲೂ ಕೆಲವರಿಂದ ವಿರೋಧ ಕೇಳಿಬರುತ್ತಿದೆ. ಈ ನಡುವೆ ಇಂದು ಸುವರ್ಣಸೌಧದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಯಾವ ಉದ್ದೇಶಕ್ಕೆ ಈ ಮಸೂದೆ ಜಾರಿಗೆ​ ತರುತ್ತಾರೆ ಎಂದು ನಮಗೆ ಗೊತ್ತಾಗ್ತಿಲ್ಲ. ರಾಜ್ಯದಲ್ಲಿ ಜ್ವಲಂತ ಸಮಸ್ಯೆ ಸಾಕಷ್ಟಿವೆ, ಅದರ ಬಗ್ಗೆ ಚರ್ಚಿಸಲಿ. ಈ ಕಾಯ್ದೆ ಆರ್​ಎಸ್​ಎಸ್​​ನವರ ಕೂಸು. ಜನರ ಮನಸ್ಸು ಕೆಡಿಸಲು ತಂದಿರುವಂತಹ ಕಾಯ್ದೆ ಇದು ಎಂದು ಮತಾಂತರ ನಿಷೇಧ ಕಾಯ್ದೆ ಕುರಿತು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕಾಯ್ದೆ ಬಗ್ಗೆ ಇನ್ನೂ ಚರ್ಚೆ ಮುಗಿದಿಲ್ಲ. ಚರ್ಚೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಜೆಡಿಎಸ್​ನವರು ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ನಾವು ಮತಾಂತರ ನಿಷೇಧ ಕಾಯ್ದೆಯ ಪ್ರಸ್ತಾಪಕ್ಕೇ ವಿರೋಧ ವ್ಯಕ್ತಪಡಿಸಿದ್ದೇವೆ ಎಂದಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. ಒಂದು ವೇಳೆ ಕಾಯ್ದೆ ಜಾರಿಯಾದ್ರೆ ಕಾಯ್ದೆ ತೆಗೆದುಹಾಕುತ್ತೇವೆ. 2023ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬಂದು ಈ ಕಾಯ್ದೆಯನ್ನು ತೆಗೆದುಹಾಕುತ್ತೇವೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಚಿದಾನಂದಮೂರ್ತಿ, ಜಯದೇವ, ಎಸ್​.ಆರ್​. ಲೀಲಾ ಅರ್ಜಿ ಕೊಟ್ಟಿದ್ದರು. ಆ ದಾಖಲೆಗಳನ್ನ ಮುಂದಿಟ್ಟು ಈ ಕಾನೂನು ತರಲಾಗಿದೆ ಎಂದು ಸಿದ್ದರಾಮಯ್ಯ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ್, ಎಸ್​. ಆರ್ ಲೀಲಾ ಇವರೆಲ್ಲರೂ ಆರ್​ಎಸ್​ಎಸ್​ನವರು. ಇವರು ಲಾ ಕಮಿಷನ್ ಗೆ ಅರ್ಜಿ ಕೊಟ್ಟಿದ್ದರು. ಕಾನೂನು ಎಲ್ಲರಿಗೂ ಒಂದೇ. ನಾನು ಸಿಎಂ ಆಗಿದ್ದಾಗ ಮಾಡುವ ಮನಸು ಇದ್ದಿದ್ದರೆ ಎರಡು ವರ್ಷ ಟೈಮ್‌ ‌ಇತ್ತು. ಆದರೆ ನಾನು ಮಾಡಲಿಲ್ಲ. ಇದೊಂದು ಅಸಂವಿಧಾನಿಕ ಕಾನೂನು. ಉತ್ತರ ಪ್ರದೇಶ, ಗುಜರಾತ್ ಮತ್ತು ಇವರು ತಂದಿರುವ ಕಾನೂನು ಒಂದೇ ರೀತಿಯಲ್ಲಿ ಇದೆ‌. ಇದರ ಹಿಂದೆ ಆರ್.ಎಸ್.ಎಸ್ ಕೈವಾಡವಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಮ್ಯಾಚ್​ ಫಿಕ್ಸಿಂಗ್ ಆರೋಪಕ್ಕೆ ಸಿದ್ದರಾಮಯ್ಯ ಕಿಡಿ: ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಶಾಸಕ ಹೆಚ್​.ಡಿ. ರೇವಣ್ಣ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ನಾನು‌ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಮ್ಯಾಚ್ ಫಿಕ್ಸಿಂಗ್ ಅನ್ನೋದೇ ನನಗೆ ಗೊತ್ತಿಲ್ಲ. ಸಿಎಂ‌ ಆಗಿದ್ದಾಗ ನಾನು ಅವರ್ಯಾರ ಮನೆಗೂ ಹೋಗಿಲ್ಲ. ಒಂದು ಕೆಲಸ ಮಾಡಿಕೊಡಿ ಅಂತ ನಾನು ಯಾವ ಸಚಿವನ ಮನೆಗೆ, ಸಿಎಂ ಮನೆಗೂ ಹೋಗಿಲ್ಲ. ನಾನು ರಾಜಕೀಯ ಜೀವನದಲ್ಲಿ ನಾನು ಹಾಗೆ ನಡೆದುಕೊಂಡಿದ್ದೇನೆ. ನೀವು ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದೀರೇ ವಿನಃ ನಾವಲ್ಲ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಬೇಜವಾಬ್ದಾರಿ ವಿರೋಧ ಪಕ್ಷ: ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಬೊಮ್ಮಾಯಿ

Anti Conversion Bill: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕರ ಮನವಿ

Follow us on

Related Stories

Most Read Stories

Click on your DTH Provider to Add TV9 Kannada