ಸ್ವಕ್ಷೇತ್ರದಲ್ಲಿ ಭೂಮಿ ಪೂಜೆ ನೆರವೇರಿಸಿದ ಸಿದ್ದರಾಮಯ್ಯ: ‘ಹೌದು ಹುಲಿಯಾ‘ ಎಂದ ಗ್ರಾಮಸ್ಥರು!

| Updated By: ಸಾಧು ಶ್ರೀನಾಥ್​

Updated on: Feb 11, 2021 | 3:34 PM

ಗೋವನಕೊಪ್ಪದಲ್ಲಿ ಭೂಮಿ ಪೂಜೆ ಸಲ್ಲಿದ ಬಳಿಕ ಸಿದ್ದರಾಮಯ್ಯ ಮಾತನಾಡುತ್ತಿರುವಾಗ, ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬರಬೇಕೆಂದು ‘ಹೌದು ಹುಲಿಯಾ’ ಎಂದು ಗ್ರಾಮಸ್ಥರು ಘೋಷಣೆ ಕೂಗಿದ್ದಾರೆ.

ಸ್ವಕ್ಷೇತ್ರದಲ್ಲಿ ಭೂಮಿ ಪೂಜೆ ನೆರವೇರಿಸಿದ ಸಿದ್ದರಾಮಯ್ಯ: ‘ಹೌದು ಹುಲಿಯಾ‘ ಎಂದ ಗ್ರಾಮಸ್ಥರು!
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬಾಗಲಕೋಟೆ: ಗೋವನಕೊಪ್ಪದಲ್ಲಿ ಭೂಮಿ ಪೂಜೆ ನೆರವೇರಿಸಿದ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ‘ಹೌದು ಹುಲಿಯ’ ಎಂದು ಗ್ರಾಮಸ್ಥರು ಘೋಷಣೆ ಕೂಗಿದ್ದಾರೆ. ಭಾಷಣ ಮಾಡುತ್ತಿರುವಾಗ, ನನ್ನ ಸರ್ಕಾರದ ಅವಧಿಯಲ್ಲಿ ಹಣದ ಕೊರತೆ ಇರಲಿಲ್ಲ. ಆದರೆ ಈಗಿನ ಸರ್ಕಾರದಲ್ಲಿ ಹಣದ ಕೊರತೆ ಇದೆ ಎಂದು ಮಾತನಾಡುತ್ತಿದ್ದ ವೇಳೆ ಜನರು ಕೇಕೆ ಹಾಕಿದ್ದಾರೆ. ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬರಬೇಕೆಂದು ಘೋಷಣೆ ಕೂಗಿದ್ದಾರೆ. 

ಎಂಜಿನಿಯರ್​ಗೆ ತರಾಟೆ
ಭಾಷಣದಲ್ಲಿ ಸಿದ್ಧರಾಮಯ್ಯ ಬಾದಾಮಿ PWD ಎಇಇ ಎಸ್.ವಿ.ಜಾಡರ್​ಗೆ ತರಾಟೆ ತೆಗೆದುಕೊಂಡಿದ್ದು, 2 ಕೊಟಿ ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಭೂಮಿ ಪೂಜೆ ಮಾಡಲಾಗಿದೆ. ಮಳೆ ಆರಂಭವಾಗುವುದರೊಳಗೆ ಪ್ರವಾಹದಿಂದ ಹಾನಿಯಾದ ರಸ್ತೆ ಕಾಮಗಾರಿ ಮುಗಿಸಿ ಎಂದು ಸೂಚಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎಇಇ ಎಸ್.ವಿ.ಜಾಡರ್, 1 ತಿಂಗಳಿಗೆ ಕಾಮಗಾರಿ ಮುಗಿಸುತ್ತೇವೆ ಎಂದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ನೀನು ಸುಳ್ಳು ಹೇಳುತ್ತೀಯಾ, ಯಾವಾಗ ಕೆಲಸ ಮುಗಿಸುತ್ತೀಯಾ ಹೇಳು ಎಂದು ಎಂಜಿನಿಯರ್​ಗೆ ತರಾಟೆ ತೆಗೆದುಕೊಂಡಿದ್ದಾರೆ.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 2 ವರ್ಷವಾದ ನಂತರ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾವು ಅಧಿಕಾರಕ್ಕೆ ಬಂದ ಮರುದಿನವೇ ಗೋವನಕೊಪ್ಪ ಗ್ರಾಮ ಪಂಚಾಯತಿಯಾಗಿ ಘೋಷಿಸುತ್ತೇನೆ. ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದು ಬರೆದು ಇಂಕ್​ ಖಾಲಿಯಾಗಿದೆ. ಮಂತ್ರಿಗಳನ್ನು ನಂಬಿಕೊಂಡರೆ ಮೂರು ಕಾಸಿನದು ಆಗೋದಿಲ್ಲ. ಏನೇ ಆದರೂ ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಹಿಡಿದು ಕೆಲಸ ಮಾಡಿಸುತ್ತೇನೆ. ಬಿಜೆಪಿಯವರ ತಪ್ಪುಗಳ ಬಗ್ಗೆ ಹೇಳಿದರೆ ಬೈತೀನಿ ಅಂತ ಮಾತನಾಡಿಕೊಳ್ಳುತ್ತಾರೆ. ಬಿಜೆಪಿಯವರು ಒಂದೆಡೆ ಸಾಲವನ್ನು ಮಾಡುತ್ತಿದ್ದಾರೆ, ಮತ್ತೊಂದೆಡೆ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಅವರಿಗೆ ಅಧಿಕಾರ ಮಾಡಲಾಗದಿದ್ದರೆ ಬಿಟ್ಟು ಹೋಗಲಿ, ನಾವು ಆಡಳಿತ ಮಾಡುತ್ತೇವೆ ಎಂದು ಹೇಳಿದರು.

ನಾನು ಮುಖ್ಯಂತ್ರಿಯಾಗಿದ್ದಾಗ 7 ಕೆಜಿ ಅಕ್ಕಿಯನ್ನು ನೀಡುತ್ತಿದ್ದೆ. ಅದನ್ನು ನಮ್ಮ ಅಪ್ಪನ ಮನೆಯಿಂದ ತಂದುಕೊಡುತ್ತಿದ್ನಾ? ಈಗಲೂ ಮುಖ್ಯಮಂತ್ರಿ ಬಿಎಸ್​ವೈ 7 ಕೆಜಿ ಅಕ್ಕಿಯನ್ನು ನೀಡಲಿ. ಅದನ್ನೇನಾದರೂ ಅವರಪ್ಪನ ಮನೆಯಿಂದ ತಂದು ಕಾಡುತ್ತಾರಾ? ಜನರ ಹಣದಿಂದಲೇ ಅವರು ಪಡಿತರ ಅಕ್ಕಿ ನೀಡುವುದು. ಕೆರೆಯ ನೀರನ್ನು ಕೆರೆಗೆ ಚೆಲ್ಲಲೂ ಅವರಿಗೆ ಕಷ್ಟವಾಗಿದೆ ಎಂದರು.

ಇದನ್ನೂ ಓದಿ: ಫೆ. 22ರಿಂದ ಪ್ರಕೃತಿ ಚಿಕಿತ್ಸೆಗೆ ತೆರಳಲಿದ್ದಾರೆ ಸಿದ್ದರಾಮಯ್ಯ.. ಕಳೆದ ಬಾರಿ HDK ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದರು! ಈ ಬಾರಿ ಏನು?