Sedam District: ವಿಜಯನಗರ ಆಯ್ತು, ಈಗ ಸೇಡಂ ಸರದಿ! ನೂತನ ಜಿಲ್ಲೆ ರಚನೆಗೆ ಆಗ್ರಹ; ಪಕ್ಷಾತೀತ ವೇದಿಕೆ ಸಿದ್ಧ
ಕಾಳಗಿ, ಚಿತ್ತಾಪುರ, ಚಿಂಚೋಳಿ ತಾಲೂಕಗಳನ್ನೊಳಗೊಂಡು ಸೇಡಂ ಅನ್ನು ನೂತನ ಜಿಲ್ಲೆಯನ್ನು ಮಾಡಬೇಕು ಎನ್ನುವ ಆಗ್ರಹ ಪುನಃ ಪ್ರಾರಂಭವಾಗಿದ್ದು, ಸೇಡಂ ಅನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ರೂಪುರೇಷೆ ನಿರ್ಮಾಣ ಮಾಡಲಾಗಿದೆ.
ಕಲಬುರಗಿ: ರಾಜ್ಯ ಸರ್ಕಾರ ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ನೂತನ 31 ನೇ ಜಿಲ್ಲೆಯನ್ನಾಗಿ ಅಧಿಕೃತ ಘೋಷಣೆ ಮಾಡಿದ ಬೆನ್ನಲ್ಲೇ, ರಾಜ್ಯದ ಅನೇಕ ಕಡೆ ನೂತನ ಜಿಲ್ಲೆಗಳ ರಚನೆಗೆ ಮತ್ತೆ ಆಗ್ರಹ ಹೆಚ್ಚಾಗುತ್ತಿದೆ. ಅದೇ ರೀತಿ ಇದೀಗ ಕಲಬುರಗಿ ಜಿಲ್ಲೆಯಲ್ಲಿ ಕೂಡ ಮತ್ತೊಂದು ನೂತನ ಜಿಲ್ಲೆಗೆ ಆಗ್ರಹ ಪ್ರಾರಂಭವಾಗಿದೆ. ಇಲ್ಲಿನ ವಿಶೇಷವೆಂದರೆ 2010 ರಲ್ಲಿ ಕಲಬುರಗಿ ಜಿಲ್ಲೆಯಲ್ಲಿದ್ದ ಯಾದಗಿರಿಯನ್ನು ಪ್ರತ್ಯೇಕಿಸಿ, ಇದೇ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ, ಯಾದಗಿರಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿತ್ತು. ಇದೀಗ ಮತ್ತೆ ಕಲಬುರಗಿ ಜಿಲ್ಲೆಯಲ್ಲಿ ಸೇಡಂ ಅನ್ನು ನೂತನ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಆಗ್ರಹ ಪ್ರಾರಂಭವಾಗಿದೆ. ಸೇಡಂ ಸದ್ಯ ಕಲಬುರಗಿ ಜಿಲ್ಲೆಯ ತಾಲೂಕು ಕೇಂದ್ರವಾಗಿದೆ.
ಯಾದಗಿರಿ ಜಿಲ್ಲೆ ವಿಭಜನೆಯಾಗುವ ಮುನ್ನವೇ ಸೇಡಂನ್ನು ನೂತನ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಆಗ್ರಹವಿತ್ತು. 2009 ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ. ಪ್ರಕಾಶ್ ನೇತೃತ್ವದ ಆಯೋಗ, ಅದಕ್ಕೂ ಮೊದಲೇ ರಚನೆಯಾಗಿದ್ದ ವಾಸುದೇವರಾವ್, ಹುಂಡೇಕಾರ್, ಗದ್ದಿಗೌಡರ ಆಯೋಗಗಳು ಸೇಡಂ ಜಿಲ್ಲಾ ಕೇಂದ್ರಕ್ಕೆ ಸೂಕ್ತವಾಗಿದೆ ಎಂದು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದವು.
ಆಗ ಸೇಡಂ ಅನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದು ಅನೇಕ ಹೋರಾಟಗಳು ಕೂಡ ನಡೆದಿದ್ದವು. ಆದರೆ ಸರ್ಕಾರ ಭೌಗೋಳಿಕ ಪ್ರದೇಶದ ಹಿನ್ನೆಲೆಯಲ್ಲಿ ಯಾದಗಿರಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿತ್ತು. ಮೊದಲು ಕಲಬುರಗಿ ಜಿಲ್ಲೆಯಲ್ಲಿಯೇ ಇದ್ದ ಯಾದಗಿರಿ, ಶಹಪುರ, ಸುರಪುರ ತಾಲೂಕುಗಳನ್ನು ಸೇರಿಸಿ, ಯಾದಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ನೂತನ ಜಿಲ್ಲೆಯನ್ನಾಗಿ 2010 ರಲ್ಲಿ ಘೋಷಿಸಲಾಗಿತ್ತು. ಇದೀಗ ಕಾಳಗಿ, ಚಿತ್ತಾಪುರ, ಚಿಂಚೋಳಿ ತಾಲೂಕಗಳನ್ನೊಳಗೊಂಡು ಸೇಡಂ ಅನ್ನು ನೂತನ ಜಿಲ್ಲೆಯನ್ನು ಮಾಡಬೇಕು ಎನ್ನುವ ಆಗ್ರಹ ಪುನಃ ಪ್ರಾರಂಭವಾಗಿದೆ.
ಸೇಡಂ ಜಿಲ್ಲೆ ರಚನೆಗಾಗಿ ಪಕ್ಷಾತೀತ ವೇದಿಕೆ: ವಿಜಯನಗರ ಜಿಲ್ಲೆ ರಚನೆಯಾದ ನಂತರ ಇದೀಗ ಮತ್ತೆ ಸೇಡಂ ಜಿಲ್ಲಾ ರಚನೆಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸೇಡಂ ಜಿಲ್ಲಾ ರಚನೆಗಾಗಿ ಕೆಲ ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರು ಸೇರಿಕೊಂಡು ಸೇಡಂ ಪ್ರತ್ಯೇಕ ಜಿಲ್ಲಾ ಹೋರಾಟ ಪಕ್ಷಾತೀತ ವೇದಿಕೆಯನ್ನು ಹುಟ್ಟುಹಾಕಿದ್ದು, ಅದರ ಮೂಲಕ ಪಕ್ಷಾತೀತವಾಗಿ ನೂತನ ಜಿಲ್ಲಾ ರಚನೆಗೆ ಆಗ್ರಹಿಸಲು ಮುಂದಾಗಿದ್ದಾರೆ.
ಯಾವ ರೀತಿ ಹೋರಾಟ ನಡೆಸಬೇಕು. ಸರ್ಕಾರವನ್ನು ಹೇಗೆ ಮನವೊಲಿಸಬೇಕು ಎನ್ನುವುದರ ಬಗ್ಗೆ ರೂಪುರೇಷಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಎಲ್ಲರನ್ನು ಸೇರಿಸಿಕೊಂಡು ಹೋರಾಟವನ್ನು ಕಾವುಗೊಳಿಸುವ ಮೂಲಕ ನೂತನ ಸೇಡಂ ಜಿಲ್ಲೆಯನ್ನು ಪಡೆಯಬೇಕು ಎನ್ನುವುದು ಅನೇಕರ ವಾದವಾಗಿದ್ದು, ಆ ನಿಟ್ಟಿನಲ್ಲಿ ತಯಾರಿಯನ್ನು ಪ್ರಾರಂಭಿಸಿದ್ದಾರೆ.
ಸದ್ಯ ಕಲಬುರಗಿ ಜಿಲ್ಲೆಯಲ್ಲಿರುವ ಚಿಂಚೋಳಿ ಕೊನೆಯ ಹಳ್ಳಿಯಿಂದ ಕಲಬುರಗಿ ನಗರಕ್ಕೆ ಬರಲು 120 ಕಿ.ಮೀ ದೂರ ಬರಬೇಕು. ಹೀಗಾಗಿ ಸೇಡಂ ಕೇಂದ್ರವನ್ನು ಮಾಡಿ, ಕಾಳಗಿ, ಚಿತ್ತಾಪುರ, ಚಿಂಚೋಳಿ ತಾಲೂಕುಗಳನ್ನು ಸೇರಿಸಿ, ನೂತನ ಜಿಲ್ಲೆ ಮಾಡಿದರೆ ಜನರಿಗೆ ಅನಕೂಕೂಲವಾಗುತ್ತದೆ. ಸೇಡಂ ನೂತನ ಜಿಲ್ಲೆಯಾಗಲಿಕ್ಕೆ ಎಲ್ಲಾ ರೀತಿಯ ಅರ್ಹತೆ ಹೊಂದಿದೆ ಎನ್ನವುದು ನೂತನ ಜಿಲ್ಲೆಯ ಪರ ಧ್ವನಿ ಎತ್ತುತ್ತಿರುವವರ ವಾದವಾಗಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೇಡಂ: ಸದ್ಯ ಕಲಬುರಗಿ ಜಿಲ್ಲೆಯಲ್ಲಿರುವ ಸೇಡಂಗೆ ಐತಿಹಾಸಿಕ ಹಿನ್ನೆಲೆಯಿದೆ. ಸೇಡಂ ತಾಲೂಕಿನ ಮಳಖೇಡ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಕನ್ನಡದ ಮೊದಲ ಗ್ರಂಥ ಎಂದು ಹೇಳುವ ಕವಿರಾಜ ಮಾರ್ಗವನ್ನು ಕೊಟ್ಟಿರುವ ನೆಲ. 18 ಕೃತಿಗಳಿಗೆ ವಿಮರ್ಶೆ ಬರೆದು, ಮೊದಲ ವಿಮರ್ಶೆಕಾರ ಎನಿಸಿಕೊಂಡಿರುವ ಜಯತೀರ್ಥ ಯತಿಗಳ ವೃಂದಾವನ ಮಳಖೇಡ ಗ್ರಾಮದಲ್ಲಿದೆ.
ಕಾಗಿನಾ ನದಿ ತಾಲೂಕಿನಲ್ಲಿ ಹರೆದಿದೆ. ಕೊತ್ತಲ ಬಸವೇಶ್ವರ, ಪಂಚಲಿಂಗೇಶ್ವರ, ಮಾತ ಮಾಣಿಕೇಶ್ವರಿಯ ಮಠಗಳು ಇದೇ ಸೇಡಂ ತಾಲೂಕಿನಲ್ಲಿವೆ. ಐತಿಹಾಸಿಕ ಮತ್ತು ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿರುವ ನೆಲ ಸೇಡಂ. ಇನ್ನು ಸದ್ಯ ಸೇಡಂ ಸಿಮೆಂಟ್ ನಗರಿಯಾಗಿದೆ. ಸೇಡಂ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಸಿಮೆಂಟ್ ಕಾರ್ಖಾನೆಗಳು ತೆಲೆ ಎತ್ತಿವೆ. ಹೀಗಾಗಿ ಜಿಲ್ಲೆಗೆ ಹೆಚ್ಚಿನ ವರಮಾನ ಸೇಡಂ ತಾಲೂಕಿನಿಂದ ಬರುತ್ತಿದೆ. ಇನ್ನು ಸದ್ಯ ಉಪ ವಿಭಾಗಾಧಿಕಾರಿ ಕಚೇರಿ, ಲೋಕೋಪಯೋಗಿ ಇಲಾಖೆಯ ಕಚೇರಿ ಸೇರಿದಂತೆ ಅನೇಕ ಉಪ ವಿಭಾಗೀಯ ಕಚೇರಿಗಳು ಸೇಡಂ ನಲ್ಲಿವೆ.
ಸೇಡಂ ಜಿಲ್ಲೆಯಾಗಬೇಕು ಎನ್ನುವುದು ಅನೇಕ ವರ್ಷಗಳ ಹಿಂದಿನ ಬೇಡಿಕೆಯಾಗಿದೆ. ಆದರೆ ಈ ಹಿಂದೆ ಸರ್ಕಾರ ಸೇಡಂ ಅನ್ನು ಬಿಟ್ಟು ಯಾದಗಿರಿ ಜಿಲ್ಲೆಯನ್ನು ಘೋಷಿಸಿತ್ತು. ಇದೀಗ 4 ತಾಲೂಕುಗಳನ್ನೊಳಗೊಂಡು ಸೇಡಂ ಜಿಲ್ಲೆ ರಚನೆ ಮಾಡಿದರೆ, ಜನರಿಗೆ ಹೆಚ್ಚಿನ ಅನಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತಿತವಾಗಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ನೂತನ ಜಿಲ್ಲಾ ರಚನೆಗೆ ಆಗ್ರಹಿಸಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಹೇಳಿದ್ದಾರೆ.
ಇದನ್ನೂ ಓದಿ: ಇದ್ಯಾವ ಸೀಮೆ ನ್ಯಾಯ ಸಚಿವರೇ? ನೀವೇನು ಕರ್ನಾಟಕಕ್ಕೆ ಸಚಿವರಾ? ಅಥವಾ ಚಿಕ್ಕಮಗಳೂರಿಗೆ ಮಾತ್ರನಾ?
Published On - 2:20 pm, Thu, 11 February 21