
ಚಿಕ್ಕಬಳ್ಳಾಪುರ, (ಜನವರಿ 21): ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ (Rajiv Gowda)ತಲೆಮರೆಸಿಕೊಂಡಿದ್ದು, ಇತ್ತ ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ ಹಾಗೂ ಜೆಡಿಎಸ್, ರಾಜೀವ್ ಗೌಡ ಕಾಣೆಯಾಗಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿದೆ. ಇದು ಆಡಳಿತರೂಢ ಕಾಂಗ್ರೆಸ್ಗೆ ಮುಜುಗರವಾಗಿದೆ. ಇದರಿಂದ ಆರೋಪಿ ರಾಜೀವ್ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದಾರೆ.
ರಾಜೀವ್ ಗೌಡ ಅವರ ನಡೆ ಮಾಧ್ಯಮಗಳಲ್ಲಿ ಪ್ರಚಾರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಜ್ಯ ಮಟ್ಟದ ನಾಯಕರಿಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಅವರು ಶಿಸ್ತು ಸಮಿತಿಗೆ ಪತ್ರ ಬರೆದಿದ್ದಾರೆ. ‘ಪಕ್ಷದ ಘನತೆಗೆ ಧಕ್ಕೆ ತಂದಿರುವ ರಾಜೀವ್ ಗೌಡ ಅವರನ್ನು ತಕ್ಷಣವೇ ಪಕ್ಷದಿಂದ ಅಮಾನತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಬ್ಯಾನರ್ ತೆರವು ಮಾಡಿರುವ ಸಂಬಂಧ ರಾಜೀವ್ ಗೌಡ, ಶಿಡ್ಲಘಟ್ಟ ಮಹಿಳಾ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಇದೀಗ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕಳೆದ ಜನವರಿ 15, 2026 ರಂದು ರಾಜೀವ್ ಗೌಡ ಅವರಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ತಲುಪಿದರೂ ಸಹ ಅವರು ಇದುವರೆಗೂ ಯಾವುದೇ ಲಿಖಿತ ಉತ್ತರ ಅಥವಾ ಸ್ಪಷ್ಟನೆ ನೀಡಿಲ್ಲ. ಇದರಿಂದ ರಾಜೀವ್ ಗೌಡ ಅಮಾನತಿಗೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ರಾಜೀವ್ ಗೌಡ ಸಸ್ಪೆಂಡ್ ಆಗುವುದು ಬಹುತೇಕ ಖಚಿತವಾಗಿದ್ದು, ಯಾವುದೇ ಸಂದರ್ಭದಲ್ಲೂ ಸಹ ಆದೇಶ ಹೊರಬೀಳಬಹುದು.
ಬ್ಯಾನರ್ ತೆರವು ಮಾಡಿರುವ ಸಂಬಂಧ ರಾಜೀವ್ ಗೌಡ, ಶಿಡ್ಲಘಟ್ಟ ಮಹಿಳಾ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಅಮೃತಾ ಅವರು ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಪೊಲೀಸರು ಸಹ ಎಫ್ಐಆರ್ ದಾಖಲಿಸಿದ್ದಾರೆ. ಆದ್ರೆ, ಇದುವರೆಗೂ ರಾಜೀವ್ ಗೌಡನನ್ನು ಬಂಧಿಸಲು ಆಗಿಲ್ಲ. ಇನ್ನು ರಾಜೀವ್ ಗೌಡ ಎಲ್ಲಿದ್ದಾನೆ ಎನ್ನುವ ಸುಳಿವು ಸಹ ಸಿಕ್ಕಿಲ್ಲ. ಇನ್ನೊಂದೆಡೆ ಸಚಿವ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಬೇಕಂತಲೇ ರಾಜೀವ್ ಗೌಡನನ್ನು ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರನ ಸಿನಿಮಾ ಕಾರ್ಯಕ್ರಮದ ನಿಮಿತ್ತ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದ್ರೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರು ಕೇಳಿಬಂದಿದ್ದರಿಂದ ರಾಜೀವ್ ಗೌಡ ಇದ್ದ ಬ್ಯಾನರ್ ತೆರವುಗೊಳಿಸಿದ್ದರು. ಅಲ್ಲದೇ ಮಾಹಿತಿ ನೀಡಿ ಬೇರೆ ಸ್ಥಳದಲ್ಲಿ ಹಾಕಿಕೊಳ್ಳಿ ಎಂದು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ರಾಜೀವ್ ಗೌಡ ಅವರು ನಗರಸಭೆಯ ಪೌರಾಯುಕ್ತರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದಿದ್ದಾರೆ. ಅಶ್ಲೀಲವಾಗಿ ವೈಯಕ್ತಿಕವಾಗಿ ನಿಂದಿಸಿರುವ ಆಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗೆ ಸಾರ್ವಜನಿಕ ಪ್ರತಿನಿಧಿಯಾಗಬಯಸುವ ವ್ಯಕ್ತಿಯೊಬ್ಬರು ಈ ರೀತಿ ನಡೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಪೌರಾಯುಕ್ತೆ ಅಮೃತಾ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಶಿಡ್ಗಘಟ್ಟ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.