
ದಿನದಿಂದ ದಿನಕ್ಕೆ ಕಾವು ಏರುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯ ನಡುವೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗ, ಬಿ.ವೈ. ವಿಜಯೇಂದ್ರ ಶಿರಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಅವರೇನು ಅಭ್ಯರ್ಥಿ ಅಲ್ಲ. ಆದರೆ, ಈ ಉಪಚುನಾವಣೆ ವಿಜಯೇಂದ್ರ ಅವರ ಭವಿಷ್ಯದ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದೆ. ಅಸಲಿನಲ್ಲಿ, ಶಿರಾ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತನ್ನ ರಾಜಕೀಯ ಭವಿಷ್ಯ ಹಾಗೂ ತಂದೆ ಯಡಿಯೂರಪ್ಪನವರ ಕುರ್ಚಿ ಭದ್ರಪಡಿಸುವ ತಂತ್ರಗಾರಿಕೆಗೆ ವಿಜಯೇಂದ್ರ ಇಳಿದಿದ್ದಾರೆ.
ಇದು ಯಾಕೆ ಮತ್ತು ಹೇಗೆ?
ಅದಕ್ಕೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಕಾಂಗ್ರೆಸ್ ಪಕ್ಷ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಅರೋಪ ಮಾಡಿ ಒಂದಿಷ್ಟು ದಾಖಲೆ ಬಿಡುಗಡೆ ಮಾಡಿ ಮುಜುಗರ ಮಾಡಲು ಪ್ರಯತ್ನಿಸಿದೆ. ಅಷ್ಟೇ ಅಲ್ಲ, ಬಿಜೆಪಿ ಹೈ ಕಮಾಂಡ್ ಎದುರಿಗೆ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನಿರೂಪಿಸಲು ಪ್ರಯತ್ನಿಸಿತು. ಈ ಎಲ್ಲ ವಿಚಾರಗಳು ತೀವ್ರ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಮೊದಲೇ, ಉಪಚುನಾವಣೆ ಘೋಷಣೆ ಆಯ್ತು.
ಬಿಜೆಪಿ ಪಕ್ಷದ ಮೂಲಗಳ ಪ್ರಕಾರ, ಆರ್ ಆರ್ ನಗರ ಉಪಚುನಾವಣೆಯನ್ನು ಪಕ್ಷ ಗೆಲ್ಲುವುದು ಎಂಬ ವಿಶ್ವಾಸದಿಂದ ಒಕ್ಕಲಿಗ ನಾಯಕ/ಮಂತ್ರಿಗಳನ್ನು ನಿಯುಕ್ತಿಗೊಳಿಸಿದೆ. ಶಿರಾದಲ್ಲಿ ಸ್ವಲ್ಪ ಕಷ್ಟವಿದೆ, ಹಾಗಾಗಿ ಅಲ್ಲಿ ಬರುವ ಎಲ್ಲ ತೊಡಕನ್ನು ಎದುರಿಸಿ, ರಾಜೇಶ್ ಗೌಡ ಅವರನ್ನು ಗೆಲ್ಲಿಸಲು ವಿಜಯೇಂದ್ರ ಸ್ವತಃ ತಾವೇ ಮುಂದಾಗಿದ್ದಾರೆ.
ಈ ಹಿಂದೆ, ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಉಪಚುನಾವಣೆಯ ಸಂದರ್ಭದಲ್ಲಿ ಅಲ್ಲಿಯೇ ಕ್ಯಾಂಪ್ ಹಾಕಿದ್ದ ವಿಜಯೇಂದ್ರ ಪಕ್ಷದ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಗೆಲ್ಲಿಸಿಕೊಂಡು ಬಂದ್ದಿದ್ದು ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿತ್ತು. ಇದನ್ನು ಗುರುತಿಸಿ, ಅಂದಿನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ವಿಜಯೇಂದ್ರರನ್ನು ದೆಹಲಿಗೆ ಕರೆಸಿ ಬೆನ್ನು ತಟ್ಟಿ ಕಳಿಸಿದ್ದರು.
ಈಗ ಅಂಥದೇ ಮತ್ತೊಂದು ರಾಜಕೀಯ ಸವಾಲನ್ನು ಎದುರಿಸಿ ಪಕ್ಷಕ್ಕೆ ಹೆಸರು ತಂದು ತನ್ನ ಮೇಲಿನ ಆರೋಪಕ್ಕೆ ಪಕ್ಷದ ಮಿತಿಯಲ್ಲಿ ಪ್ರತ್ಯುತ್ತರ ಕೊಡಲು ಸಜ್ಜಾಗಿದ್ದಾರೆ. ಇನ್ನುವರೆಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆದ್ದಿಲ್ಲ. ಪ್ರತಿ ಬಾರಿಯೂ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಿರುವ ಬಿಜೆಪಿ ಈ ಬಾರಿ ಮಾತ್ರ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ.
ರಾಜಕೀಯ ಲಾಭ ಹೇಗೆ?
ಪಕ್ಷದ ಮೂಲಗಳ ಪ್ರಕಾರ, ಇಂಥ ಕ್ಷೇತ್ರವನ್ನು ಗೆದ್ದರೆ, ಮತ್ತೆ ಹೈ ಕಮಾಂಡ್ ತನ್ನನ್ನು ಕರ್ನಾಟಕದ ಚಾಣಕ್ಯ ಎಂದು ಗುರುತಿಸಿ ತನ್ನ ಮೇಲಿರುವ ಆರೋಪವನ್ನು ನಿರ್ಲಕ್ಷಿಸಿ ತನಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಬಹುದು ಎಂಬುದು ವಿಜಯೇಂದ್ರ ಅವರ ಲೆಕ್ಕಾಚಾರ. ಅದೇ ರೀತಿ, ಈ ಬಾರಿ ಎರಡೂ ಕ್ಷೇತ್ರವನ್ನು ತನ್ನ ಬುಟ್ಟಿಗೆ ಹಾಕಿಕೊಂಡರೆ, ಅದನ್ನ ಯಡಿಯೂರಪ್ಪ ಅವರ ಜನಪ್ರಿಯತೆ ಗುರುತಿಸುವ ಮಾನದಂಡವಾಗಿ ಉಪಯೋಗಿಸಿ ಅವರನ್ನು ಇಳಿಸುವ ಶಕ್ತಿಗಳ ಕೈ ಮೇಲಾಗದಂತೆ ಪಕ್ಷದ ಹೈಕಮಾಂಡ್ ನೋಡಿಕೊಳ್ಳಬಹುದು ಎಂದು ವಿಜಯೇಂದ್ರ ನಂಬಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
Published On - 5:01 pm, Mon, 19 October 20