ಬೆಂಗಳೂರು: ನಗರದಲ್ಲಿ ಇಂದು (ಜುಲೈ 2) ಮಧ್ಯಾಹ್ನ 12.30 ಗಂಟೆ ಆಸುಪಾಸಿಗೆ ದೊಡ್ಡದಾದ ಸ್ಫೋಟವಾದಂತೆ ಶಬ್ದವೊಂದು ಕೇಳಿಬಂದಿತ್ತು. ಕೆಂಗೇರಿ, ರಾಜರಾಜೇಶ್ವರಿ ನಗರ, ವಿಜಯನಗರ ಮುಂತಾದ ಕಡೆಗಳಲ್ಲಿ ಈ ಸದ್ದು ಕೇಳಿಬಂದಿರುವ ಮಾಹಿತಿಯನ್ನು ಜನರು ಹಂಚಿಕೊಂಡಿದ್ದರು. ಈ ಬಗ್ಗೆ ಜನರಲ್ಲಿ ಹಲವು ಆತಂಕ, ಗೊಂದಲಗಳೂ ಮೂಡಿದ್ದವು. ಎರಡು ಸೆಕೆಂಡುಗಳ ಕಾಲ ಕಿಟಕಿ, ಬಾಗಿಲು ಅಲುಗಾಡಿದ ಅನುಭವವೂ ಆಗಿದೆ ಎಂಬ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾರಂಭಿಸಿದ್ದರು. ಅನೇಕ ಮಂದಿ ತಮಗೂ ಅನುಭವ ಆಗಿದೆ ಎಂದು ಹೇಳಿಕೊಂಡಿದ್ದರು.
ಈ ಸ್ಫೋಟದಂಥ ಶಬ್ದದ ಅನುಮಾನದ ಬಗ್ಗೆ ಭೂಕಂಪ ವೀಕ್ಷಣಾಲಯ ತನ್ನ ಸ್ಪಷ್ಟೀಕರಣ ನೀಡಿದೆ. ಘಟನೆಯ ಬಗ್ಗೆ ಮಾಹಿತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಲಾಗಿದೆ. ಭೂಕಂಪನದ ಅಲೆ ಉಂಟಾಗಿರುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆದರೆ, ಸೂಚಿತ ಸಮಯದಲ್ಲಿ ಆ ಸ್ಥಳದಲ್ಲಿ ಯಾವುದೇ ಭೂಕಂಪ ಆಗಿರುವ ಬಗ್ಗೆ ಡಾಟಾ ಅಥವಾ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಹೀಗೆ ಸ್ಪಷ್ಟನೆ ನೀಡಿದೆ.
ಜೊತೆಗೆ ಈ ಬಗ್ಗೆ ಹೆಚ್ಎಎಲ್ ಕೂಡ ಸ್ಪಷ್ಟೀಕರಣ ನೀಡಿದೆ. ಹೆಚ್ಎಎಲ್ ನಿಂದ ನಿತ್ಯ ಸೂಪರ್ ಸಾನಿಕ್ ವಿಮಾನಗಳ ಟೆಸ್ಟಿಂಗ್ ನಡೆಯುತ್ತಾ ಇದೆ. ಆದರೆ, ಇವತ್ತು ಬೆಂಗಳೂರಿನಲ್ಲಿ ಕೇಳಿಸಲಾಗಿದೆ ಎಂಬ ಶಬ್ದ ನಮ್ಮ ವಿಮಾನದಿಂದ ಬಂದಿದೆ ಎಂಬುದು ಖಚಿತವಿಲ್ಲ ಎಂದು ಹೆಚ್ಎಎಲ್ ತಿಳಿಸಿದೆ. ಇವತ್ತು ಕೂಡಾ ವಿಮಾನ ಹಾರಾಟ ನಡೆದಿದೆ. ಆದರೆ, ಕೇಳಿಸಿದ ದೊಡ್ಡ ಮಟ್ಟದ ಶಬ್ದದ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ ಎಂದು ಹೇಳಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12.30ರ ಆಸುಪಾಸಿನಲ್ಲಿ ಸ್ಪೋಟದ ಸದ್ದು ಕೇಳಿಬಂದಿತ್ತು. ಬಿಡದಿ, ಬನಶಂಕರಿ, ಆರ್ ಆರ್ ನಗರ, ನಾಗರಬಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೆಲವೆಡೆ ಸದ್ದು ಕೇಳಿಸಿದ ಅನುಭವ ಆಗಿತ್ತು. ಕೆಲವರು ಹೇಳುವ ಪ್ರಕಾರ 12.23ರ ಸುಮಾರಿಗೆ ಸ್ಪೋಟದ ಸದ್ದು ಕೇಳಿತ್ತು.
ಬಂಡೆ ಒಡೆದಾಗ ಬರುವ ಸದ್ದಿನಂತೆ ಕೇಳಿಸಿದ್ದು, ಪಾರಿವಾಳ ಹಾಗೂ ಇನ್ನಿತರ ಪಕ್ಷಿಗಳು ಚೆಲ್ಲಾಪಿಲ್ಲಿಯಾಗಿ ಹಾರಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಕಳೆದ ಬಾರಿಯೂ ನಗರದಲ್ಲಿ ಇಂಥದ್ದೇ ಸದ್ದು ಕೇಳಿಬಂದು ಜನರಿಗೆ ಆತಂಕ ಮೂಡಿತ್ತು. ನಂತರ ಅದು ಸೋನಿಕ್ ಸೌಂಡ್ ಎಂಬಲ್ಲಿಂದ ಹಿಡಿದು ಅನೇಕ ಲೆಕ್ಕಾಚಾರಗಳೂ ಕೇಳಿಬಂದಿದ್ದವು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಫೋಟದ ಸದ್ದು, ಕಿಟಕಿ, ಬಾಗಿಲು ಅಲುಗಾಡಿದ ಅನುಭವ; ಕಾರಣ ನಿಗೂಢ!
ಜಮ್ಮುವಿನ ಸತ್ವಾರಿಯ ಏರ್‌ಬೇಸ್‌ನಲ್ಲಿ ಡ್ರೋನ್ ಪತ್ತೆ ಕೇಸ್; ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಎನ್ಐಎ