ಮಾಜಿ ಶಾಸಕ ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಕೋರ್ಟ್

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾ ಅವರನ್ನು ಮಾ. 27ಕ್ಕೆ ಕೋರ್ಟ್​ಗೆ ಹಾಜರುಪಡಿಸುವಂತೆ ವಿಶೇಷ ಕೋರ್ಟ್, ಬೆಂಗಳೂರು ಉತ್ತರ ಡಿಸಿಪಿಗೆ ಸೂಚನೆ ನೀಡಿದೆ.

ಮಾಜಿ ಶಾಸಕ ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಕೋರ್ಟ್
ವೈ ಎಸ್ ವಿ ದತ್ತಾ, ಮಾಜಿ ಶಾಸಕ
Updated By: ರಮೇಶ್ ಬಿ. ಜವಳಗೇರಾ

Updated on: Feb 15, 2023 | 8:40 PM

ಬೆಂಗಳೂರು: ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕ ​ವೈ. ಎಸ್.​ವಿ. ದತ್ತಾ (YSV Datta) ವಿರುದ್ಧ ಕೋರ್ಟ್, ಬಂಧನ ವಾರಂಟ್ ( arrest warrant) ಜಾರಿಗೊಳಿಸಿದೆ. ಸಿ.ಎಸ್.ಸೋಮೇಗೌಡ ಎನ್ನುವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ(Cheque Bounce Case) ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್, ವೈಎಸ್​ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಕೋರ್ಟ್​ಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶೆ ಜೆ.ಪ್ರೀತ್ ಅವರು ಮಾರ್ಚ್​ 27ಕ್ಕೆ ದತ್ತಾ ಅವರನ್ನು ಕೋರ್ಟ್​ಗೆ ಹಾಜರುಪಡಿಸುವಂತೆ ಬೆಂಗಳೂರು ಉತ್ತರ ಡಿಸಿಪಿಗೆ ಸೂಚನೆ ನೀಡಿದ್ದಾರೆ.

ಉದ್ಯಮಿ ಸಿ.ಎಸ್.ಸೋಮೇಗೌಡಗೆ ದತ್ತಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಸಾಲ ಪಡೆದಿದ್ದ ದತ್ತಾ ಅದಕ್ಕೆ ಬದಲಾಗಿ ಚೆಕ್ ನೀಡಿದ್ದರು. ಆದರೆ ಅದು ಅನೂರ್ಜಿತವಾಗಿದ್ದು ದತ್ತಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ನ್ಯಾಯಾಲಯ ವಾರೆಂಟ್ ಜಾರಿ ಮಾಡಿರುವುದರಿಂದ ದತ್ತಾ ಕೋರ್ಟ್ ಗೆ ಹಾಜರಾಗುವುದು ಅನಿವಾರ್ಯವಾಗುತ್ತದೆ.

ಜೆಡಿಎಸ್ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದ ದತ್ತಾ, ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ, ಇತ್ತೀಚೆಗೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕುಡೂರು ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ದತ್ತಾ ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರು ಪಡೆದುಕೊಂಡಿದ್ದಾರೆ.