ಬಳ್ಳಾರಿ: ಕಾದ ಕೆಂಡದಂತಿರುವ ಸೂರ್ಯನ ಪ್ರತಾಪಕ್ಕೆ ಗಣಿನಾಡು ಬಳ್ಳಾರಿ ಜನತೆ ಬಸವಳಿದು ಹೋಗಿದ್ದಾರೆ. ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯನ ಪಾಡೇ ಹೀಗಿರುವಾಗ ಇನ್ನು ಪ್ರಾಣಿಗಳು ಯಾವ ರೀತಿಯಾಗಿ ಈ ಬಿಸಿಲಿನ ತಾಪಮಾನವನ್ನು ಸಹಿಸಿಕೊಳ್ಳುತ್ತವೆ ಎನ್ನುವುದನ್ನು ಊಹಿಸುವುದು ಕಷ್ಟ. ಅದಕ್ಕೆ ಬಳ್ಳಾರಿಯ ಪೊಲೀಸರು ತಮ್ಮ ಇಲಾಖೆಯ ನಾಯಿಗಳನ್ನು ಬಿಸಿಲಿನಿಂದ ಪಾರುಮಾಡಿ ತಣ್ಣಗಿಡಲು ನಿರ್ಧರಿಸಿದ್ದಾರೆ. ಬಿಸಿಲಿನ ಹೊಡೆತದಿಂದ ತಪ್ಪಿಸಲು ನಾಯಿಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿಯ ಡಿಎಆರ್ ಮೈದಾನದ ಕೊಠಡಿಯಲ್ಲಿರುವ ವಿದೇಶಿ ತಳಿಯ ನಾಯಿಗಳಿಗೆ ರಾಯಲ್ ಟ್ರೀಟ್ ಮೆಂಟ್ ನೀಡಲಾಗುತ್ತಿದೆ. ಅದು ಅನಿವಾರ್ಯ ಕೂಡ. ಯಾಕೆಂದರೆ ಬಳ್ಳಾರಿಯ ಬಿಸಿಲಿಗೆ ಬೆದರಿರುವ ಪೊಲೀಸ್ ನಾಯಿಗಳು ಬದುಕಿಳಿಯುವುದು ಕಷ್ಟ. ಈ ಕಾರಣಕ್ಕೆ ಪೊಲೀಸರು ತಮ್ಮ ನಾಯಿಗಳಿಗೆ ಕೂಲರ್ ವ್ಯವಸ್ಥೆ ಮಾಡಿದ್ದಾರೆ. ತಂಪು ಹವಾಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶಗಳ ಡಾಬರ್ ಮನ್ ಪಿಂಚರ್, ಲ್ಯಾಬ್ರಡಾರ್ ತಳಿಯ ನಾಯಿಗಳಿಗೆ ಬಿಸಿಲು ತಡಿದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯ ಡಿಎಆರ್ ಮೈದಾನದಲ್ಲಿರುವ ಆರು ಶ್ವಾನಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆ ಹೇಳಿಕೇಳಿ ಬಿಸಿಲಿಗೆ ಫೇಮಸ್ಸು. ಪ್ರತಿದಿನ ಸರಾಸರಿ 42 ಡಿಗ್ರಿ ಉಷ್ಣಾಂಶವಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ. ನಮಗಾದರು ಬೆವರಿನ ಮೂಲಕ ತಾಪಮಾನ ಕಡಿಮೆಯಾಗುತ್ತದೆ. ಆದರೆ ನಾಯಿಗಳು ಬಾಯಿ ಮೂಲಕ ತಾಪಮಾನವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಪೊಲೀಸ್ ವಿದೇಶಿ ತಳಿಯ ನಾಯಿಗಳಿಗೆ ಕೂಲರ್ ಅನಿವಾರ್ಯ ಎಂದು ಪೊಲೀಸ್ ಶ್ವಾನಗಳ ಉಸ್ತುವಾರಿ ಹೊನ್ನೂರುಪ್ಪ ಹೇಳಿದ್ದಾರೆ.
ಇನ್ನು ಇಲ್ಲಿಯ ನಾಯಿಗಳಿಗೆ ಪ್ರತಿದಿನ ಎಳನೀರು ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪೇಯಗಳನ್ನು ನೀಡಲಾಗುತ್ತಿದೆ. ಜೊತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ. ಬೇಸಿಗೆಯಲ್ಲಿ ಪೊಲೀಸರು ನಾಯಿಗಳಿಗೆ ಈ ರೀತಿಯ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಬಿಸಿಲಿನ ತಾಪಮಾನದಿಂದ ಪಾರಾಗಲು ಮನುಷ್ಯರು ಎಸಿ, ಕೂಲರ್, ಮೊರೆ ಹೋದಂತೆ, ಪೊಲೀಸ್ ನಾಯಿಗಳಿಗೂ ಇದೇ ಸೌಲಭ್ಯ ಸಿಗುತ್ತಿದೆ ಎನ್ನುವುದು ವಿಶೇಷ. ಯಾವುದೇ ಅಪರಾಧ ಘಟನೆ ನಡೆದರೂ ಅದನ್ನ ಪತ್ತೆ ಹಚ್ಚಲು ಈ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳ ಆರೋಗ್ಯದಲ್ಲಿ ಏರುಪೇರು ಆಗದಂತೆ ರಕ್ಷಣೆ ಮಾಡುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಇತರರಿಗೆ ಮಾದರಿ.
(ವರದಿ-ಬಸವರಾಜ ಹರನಹಳ್ಳಿ 9980914155)
ಇದನ್ನೂ ಓದಿ:
ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು