ಬೆಂಗಳೂರು, ಏಪ್ರಿಲ್ 9: ವಾಕ್ ಮತ್ತು ಶ್ರವಣ ದೋಷವುಳ್ಳ ವಕೀಲರು ಸಂಜ್ಞಾ ಭಾಷೆಯ ಮೂಲಕ ಮಂಡಿಸಿದ ವಾದವನ್ನು ಕರ್ನಾಟಕ ಹೈಕೋರ್ಟ್ (Karnataka High Court) ಸೋಮವಾರ ಆಲಿಸಿದೆ. ಈ ಮೂಲಕ, ಸಂಜ್ಞಾ ಭಾಷೆಯಲ್ಲಿ (Sign language) ಮಂಡಿಸಿದ ವಾದ ಆಲಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಕೀಲೆ ಸಾರಾ ಸನ್ನಿ ಮಂಡಿಸಿದ ವಾದವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠವು ಆಲಿಸಿತು.
ಪ್ರಮಾಣೀಕೃತ ಸಂಜ್ಞಾ ಭಾಷಾ ಇಂಟರ್ಪ್ರಿಟರ್ (ವಿವರಣೆಕಾರ) ಮೂಲಕ 2023 ರ ಅಕ್ಟೋಬರ್‌ನಲ್ಲಿ ವಕೀಲೆ ಸಾರಾ ಸನ್ನಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿ ದೇಶದ ನ್ಯಾಯಾಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.
‘ಅರ್ಜಿದಾರರ ಪತ್ನಿಯ ಪರ ವಕೀಲೆ ಸಾರಾ ಸನ್ನಿ ಸಂಜ್ಞಾ ಭಾಷೆಯ ಇಂಟರ್ಪ್ರಿಟರ್ ಮೂಲಕ ವಿವರವಾಗಿ ವಾದ ಮಂಡನೆ ಮಾಡಿದ್ದಾರೆ. ಸಾರಾ ಸನ್ನಿ ಮಾಡಿದ ವಾದ ಮಂಡನೆಯನ್ನು ಪ್ರಶಂಸಿಸಬೇಕಾಗಿದೆ. ಸಂಜ್ಞೆ ಭಾಷಾ ಇಂಟರ್ಪ್ರಿಟರ್ ಮೂಲಕವಾದರೂ ಮೆಚ್ಚುಗೆಯಾಗುವ ರೀತಿಯಲ್ಲಿ ವಾದ ಮಂಡನೆ ಮಾಡಿದ್ದಾರೆ’ ಎಂದು ನ್ಯಾಯಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ವಾಕ್ ಮತ್ತು ಶ್ರವಣದೋಷವುಳ್ಳ ವಕೀಲರ ಅಹವಾಲುಗಳನ್ನು ದಾಖಲಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಕರ್ನಾಟಕ ಹೈಕೋರ್ಟ್ ಪಾತ್ರವಾಗಿದೆ ಎಂದರು.
ಇದನ್ನೂ ಓದಿ: ದಿವ್ಯಾಂಗರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾರಾ ಸಾಕ್ಷಿ, ಇಲ್ಲಿದೆ ಕೇರಳದ ದಿವ್ಯಾಂಗ ವಕೀಲೆಯ ಯಶೋಗಾಥೆ
ಮಹಿಳೆಯೊಬ್ಬರು ಪತಿಯ ವಿರುದ್ಧ ಐಪಿಸಿ ಸೆಕ್ಷನ್ 498 (ಎ), 504, 506 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಮಹಿಳೆಯ ಪರ ವಕೀಲೆ ಸಾರಾ ವಾದ ಮಂಡಿಸಿದ್ದರು. ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ಲುಕ್‌ಔಟ್ ನೋಟಿಸ್ಗೆ ತಡೆ ನೀಡುವಂತೆ ಕೋರಿ ಸಾರಾ ಕಕ್ಷಿಗಾರರ ಪತಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸಾರಾ ಸನ್ನಿ ಮೂಲತಃ ಕೇರಳದ ಕೊಟ್ಟಾಯಂನವರು. ಸಾರಾ ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ವಿದ್ಯಾಲಯದಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಸಾರಾಗೆ ಬಾಲ್ಯದಿಂದಲೂ ಕಿವಿ ಕೇಳಿಸುತ್ತಿರಲಿಲ್ಲ, ಮಾತು ಸಹ ಬರುತ್ತಿರಲಿಲ್ಲ. ಆದರೆ ತಂದೆ ತಾಯಿ ಬೆಂಬಲದೊಂದಿಗೆ ಎಲ್ಎಲ್ಬಿ ಕಲಿತು ವಕೀಲಿ ವೃತ್ತಿ ಆರಿಸಿಕೊಂಡಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ವಿದ್ಯಾಲಯದಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಹಿರಿಯ ವಕೀಲರಾದ ಸಂಚಿತಾ ಬಳಿ ಸಾರಾ ಸುಪ್ರೀಂಕೋರ್ಟ್ನಲ್ಲಿ ಅಭ್ಯಾಸ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ