ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ 14 ಜಿಲ್ಲೆಗಳಲ್ಲಿ ಸ್ಟೇಜ್ ಕ್ಯಾರಿಯರ್ ಬಸ್ ಸಂಚಾರಗೊಳ್ಳಲಿದೆ ಎಂದು ರಾಜ್ಯ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಷನ್ ಉಪಾಧ್ಯಕ್ಷ ಕೆ.ಕೆ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಒಟ್ಟು 9 ಸಾವಿರ ಸ್ಟೇಜ್ ಕ್ಯಾರಿಯರ್ ಖಾಸಗಿ ಬಸ್ಗಳಿವೆ. ನಾಳೆ 2000 ಖಾಸಗಿ ಬಸ್ಗಳು ರಸ್ತೆಗಿಳಿಯಲಿವೆ. ಇವುಗಳ ಪೈಕಿ 7 ಸಾವಿರ ಬಸ್ ಮಾತ್ರ ಸದ್ಯ ಕಾರ್ಯಾಚರಣೆಯಲ್ಲಿವೆ. ಉಳಿದ 2000 ಬಸ್ ನಾಳೆಯಿಂದ ಹಂತ ಹಂತವಾಗಿ ರಸ್ತೆಗೆ ಇಳಿಯುತ್ತವೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಡಿಕೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚುವರಿ ಖಾಸಗಿ ಬಸ್ ಸಂಚಾರ ಕೈಗೊಳ್ಳಲಾಗುವುದು. ಬಸ್ ದರ ಹೆಚ್ಚಳ ಇಲ್ಲ. ಈಗಿನ ದರದಲ್ಲೇ ಸೇವೆ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಬೇಡಿಕೆ ಈಡೇರಿಸಲು ಆಗಲ್ಲ ಎಂಬ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿಕೆ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ – ಕೋಡಿಹಳ್ಳಿ ಚಂದ್ರಶೇಖರ್
ಬೇಡಿಕೆ ಈಡೇರಿಸಲು ಆಗಲ್ಲ ಎಂಬ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ಸರ್ವಾಧಿಕಾರಿ ಧೋರಣೆಯನ್ನು ಸೂಚಿಸುತ್ತದೆ. ಈಗ ಶೇ 8ರಷ್ಟು ವೇತನ ಹೆಚ್ಚಿಸುತ್ತೇವೆ ಎಂದು ಹೇಳುತ್ತಾರೆ. ಈ ಹೇಳಿಕೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುವುದಿಲ್ಲವೇ? ಸಾಮಾನ್ಯ ಜನರು ಪ್ರಶ್ನಿಸಿದ್ರೆ ಮಾತ್ರ ನೀತಿಸಂಹಿತೆ ಉಲ್ಲಂಘನೆ ಆಗುತ್ತದೆಯೇ? ಎಂದು ಟಿವಿ9 ಮೂಲಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇತ್ತ ಸಾರಿಗೆ ಸಿಬ್ಬಂದಿಗಳೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯೋ ಮಾತೇ ಇಲ್ಲ. ನಾಳೆ ಒಂದು ಬಸ್ ಕೂಡಾ ರಸ್ತೆಗೆ ಇಳಿಯುವುದಿಲ್ಲ. ಸರ್ಕಾರದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಎಸ್ಮಾ ಜಾರಿ ಮಾಡಿದ್ರೂ ತಲೆ ಕೆಡಿಸಿಕೊಳ್ಳುವುದಿಲ್ಲ. 6ನೇ ವೇತನ ಆಯೋಗ ಜಾರಿಯಾಗಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ. ಬೇಡಿಕೆ ಈಡೇರಿಸಿದರೆ ಹಾಲಿನ ಅಭಿಷೇಕ ಮಾಡುತ್ತೇವೆ ಎಂದು ಸಾರಿಗೆ ಸಿಬ್ಬಂದಿ ಸರ್ಕಾರಕ್ಕೆ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ.
Bus Strike: ಸಾರಿಗೆ ನೌಕರರ ಜತೆ ಸಂಧಾನ ಪ್ರಶ್ನೆಯೇ ಇಲ್ಲ; ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಎಚ್ಚರಿಕೆ