ಬೆಂಗಳೂರು: ಮಹತ್ವಪೂರ್ಣ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಕಾರ್ಮಿಕರ ಕೆಲಸದ ಸಮಯವನ್ನ ಮತ್ತೇ 8 ಗಂಟೆಗೆ ಇಳಿಸಿದೆ. ಈ ಸಂಬಂಧ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಕೋವಿಡ್-19 ನಿಮಿತ್ತ ವಿಧಿಸಿದ್ದ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನ 8 ಗಂಟೆಯಿಂದ 10 ಗಂಟೆಗೆ ಏರಿಸಿತ್ತು. ಇದು ಕಾರ್ಮಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹಲವಾರು ಕಾರ್ಮಿಕ ಸಂಘಟನೆಗಳು ಮತ್ತು ಕಾರ್ಮಿಕ ಮುಖಂಡರು ಸರಕಾರಕ್ಕೆ ಮನವಿ ಮಾಡಿ ಕೆಲಸದ ಅವಧಿ ವಿಸ್ತರಣೆಯನ್ನ ಹಿಂದಕ್ಕೆ ಪಡೆಯಲು ಆಗ್ರಹಿಸಿದ್ದರು. ಕೆಲವರು ಈ ಸಂಬಂಧ ಕೋರ್ಟ್ ಮೆಟ್ಟಿಲು ಕೂಡಾ ಏರಿದ್ದರು.
ಈ ಸಮಯದಲ್ಲಿ ಸುಮೋಟೋ ಬಳಸಿ ಸರಕಾರ ಪ್ರಕರಣವನ್ನ ಹಿಂಪಡೆದಿತ್ತು. ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಕಾರ್ಮಿಕ ಸಚಿವರು, ಕೆಲಸದ ಅವಧಿ ವಿಸ್ತರಣೆಯನ್ನ ಹಿಂಪಡೆದು ತಕ್ಷಣದಿಂದಲೇ ಜಾರಿಗೆ ಬರುವಂತೆ ಮೊದಲಿನಂತೆ 8 ಗಂಟೆಗೆ ಇಳಿಸಿದ್ದಾರೆ.