
ಬೆಂಗಳೂರು: ಕೊರೊನಾದಿಂದಾಗಿ ಕಳೆದ ಎಂಟು ತಿಂಗಳಿನಿಂದ ಶಾಲೆಗಳು ಬಂದ್ ಆಗಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗೋ ಜೊತೆಗೆ ಕೂಲಿ ಕೆಲಸಕ್ಕೆ ಹೋಗ್ತಿದ್ದಾರೆ. ಇಷ್ಟು ದಿನ ಕಡಿಮೆಯಾಗಿದ್ದ ಬಾಲ ಕಾರ್ಮಿಕ, ಬಾಲ್ಯ ವಿವಾಹ ಪಿಡುಗುಗಳು ಮತ್ತೆ ಹೆಚ್ಚುತ್ತಿವೆ. ಈ ಬಗ್ಗೆ ಸರ್ಕಾರ, ಶಿಕ್ಷಣ ಇಲಾಖೆ ತಲೆ ಕೆಡಿಸಿಕೊಂಡಿದ್ದು, ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಕೊಳ್ತಿವೆ. ಇದೇ ಕಾರಣಕ್ಕೆ ಇಂದು ಮಹತ್ವದ ಸಭೆ ನಡೆಯಲಿದೆ.
ವಾಗ ಜಗತ್ತಿನಲ್ಲಿ ಮಹಾಮಾರಿ ಕೊರೊನಾ ಅಬ್ಬರ ಶುರುವಾಯ್ತೋ.. ಅದು ಭಾರತಕ್ಕೂ ವ್ಯಾಪಿಸಿತು. ಇದರ ಪರಿಣಾಮ ದೇಶದಲ್ಲಿ ಲಾಕ್ಡೌನ್ ಘೋಷಣೆಗೂ ಮುನ್ನವೇ ಶಾಲಾ-ಕಾಲೇಜುಗಳನ್ನ ಮುಚ್ಚಲು ಸರ್ಕಾರಗಳು ನಿರ್ಧರಿಸಿದ್ವು. ಇದಾದ ಬಳಿಕ ಕಳೆದ ಎಂಟು ತಿಂಗಳಿನಿಂದ ಮಕ್ಕಳು ಶಾಲೆಗಳ ಮುಖವನ್ನೇ ನೋಡಿಲ್ಲ. ರಾಜ್ಯದಲ್ಲಿ ಕೊರೊನಾ ಅಬ್ಬರ ಮಿತಿಮೀರಿದ್ದರಿಂದ ಸದ್ಯಕ್ಕೆ ಶಾಲೆಗಳನ್ನ ಆರಂಭಿಸೋದು ಬೇಡ ಅಂತಾ ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಕಳೆದ ಕೆಲವು ದಿನಗಳಿಂದ ಕೊರೊನಾ ಕಂಟ್ರೋಲ್ಗೆ ಬಂದಿರೋ ಕಾರಣ, ಈ ತಿಂಗಳ 17ನೇ ತಾರೀಖಿನಿಂದ ಸ್ನಾತಕೋತ್ತರ ಪದವಿ ತರಗತಿಗಳನ್ನ ಆರಂಭಿಸಲಾಗ್ತಿದೆ. ಅಲ್ದೆ, ಕೇಂದ್ರ ಸರ್ಕಾರದ ನಿಯಮಗಳಂತೆ ಇತರ ರಾಜ್ಯಗಳಲ್ಲಿ ಶಾಲೆಗಳನ್ನ ಆರಂಭಿಸ್ತಿರೋ ಕಾರಣ, ರಾಜ್ಯದಲ್ಲೂ ಶಾಲೆಗಳನ್ನ ಆರಂಭಿಸಲು ಸರ್ಕಾರ ಚಿಂತನೆ ನಡೆಸ್ತಿದೆ. ಇದೇ ಕಾರಣಕ್ಕೆ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಇಂದಿನಿಂದ ಶಾಲೆ ಆರಂಭದ ಕುರಿತು ಸಚಿವರ ಸರಣಿ ಸಭೆ!
ಈಗಾಗಲೇ ದೇಶದ ಕೆಲ ರಾಜ್ಯಗಳು ಶಾಲಾ-ಕಾಲೇಜುಗಳನ್ನ ಆರಂಭಿಸಿವೆ. ಆಯಾ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದನ್ನ ಆಧರಿಸಿ ಶಾಲೆ ಆರಂಭ ಮಾಡಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಮತ್ತು ಕೇಂದ್ರ ಸರ್ಕಾರದ ನಿಯಮಾವಳಿಗಳನ್ನ ಆಧರಿಸಿ ರಾಜ್ಯ ಸರ್ಕಾರ ಕೂಡಾ ಕಾಲೇಜು ಆರಂಭಕ್ಕೆ ಮೂಹೂರ್ತ ಫಿಕ್ಸ್ ಮಾಡಿದೆ. ಇದರ ಜೊತೆಗೆ ಈಗ ಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗ್ಲೇ ಆರೋಗ್ಯ ಇಲಾಖೆ, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ವೈದ್ಯರಿಂದ ಶಾಲೆ ಆರಂಭದ ಬಗ್ಗೆ ಸರ್ಕಾರ ವರದಿ ಸಂಗ್ರಹಿಸಿದೆ. ಜೊತೆಗೆ ಶಾಸಕರು, ಸಂಸದರು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಇವರೆಲ್ಲರೂ ನೀಡಿರೋ ವರದಿಯ ಸಾಧಕ-ಬಾಧಕಗಳ ಕುರಿತು ಡಿಡಿಪಿಐಗಳ ಜೊತೆ ಚರ್ಚಿಸಲು ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಎಲ್ಲಾ ಜಿಲ್ಲೆಗಳ ಡಿಡಿಪಿಐಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈಗ ಶಾಲೆಗಳು ಬಂದ್ ಆಗಿರೋದ್ರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಬಡ ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲ್ತಿದಾರೆ.. ಕೆಲ ಮಕ್ಕಳು ಬಾಲ ಕಾರ್ಮಿಕರಾಗ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಶಾಲೆ ಆರಂಭ ಮಾಡಲೇ ಬೇಕಾದ ಟೆನ್ಷನ್ ಶುರುವಾಗಿದೆ.
ಇದೇ ಕಾರಣಕ್ಕೆ ಶಿಕ್ಷಣ ಸಚಿವರು ಸರಣಿ ಸಭೆ ನಡೆಸಲಿದ್ದಾರೆ. ಇಂದಿನಿಂದ ಮೂರು ದಿನ ಸಚಿವ ಸುರೇಶ್ ಕುಮಾರ್ ಸರಣಿ ಸಭೆ ಮಾಡಲಿದ್ದಾರೆ. ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದು, ಶಾಲೆ ಆರಂಭಿಸೋ ಕುರಿತು ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಇಂದಿನಿಂದ ನಡೆಯೋ ಸರಣಿ ಸಭೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಇದಾದ ಬಳಿಕ ಶಾಲೆ ಆರಂಭದ ಬಗ್ಗೆ, ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಯುರೋಪಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಮತ್ತೆ ಲಾಕ್ಡೌನ್, ಸೀಲ್ಡೌನ್ ಶುರುವಾಗಿದೆ. ದೇಶದಲ್ಲಿಯೂ ಕೊರೊನಾ ಎರಡನೇ ಅಲೆ ಆರಂಭದ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಚಳಿಗಾಲದಲ್ಲಿ ಕೊರೊನಾ ಹೆಚ್ಚಳವಾಗುತ್ತೆ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಇಂತಾ ಸಮಯದಲ್ಲಿ ಸರ್ಕಾರ ಶಾಲೆ ಆರಂಭಿಸುವ ಸಾಹಸಕ್ಕೆ ಮುಂದಾಗಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಗೊತ್ತಿದ್ದು ಗೊತ್ತಿದ್ದು ಮಕ್ಕಳನ್ನ ಶಾಲೆಗೆ ಕಳಿಸೋದು ಹೇಗೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕೊರೊನಾ ಎರಡನೇ ಅಲೆಯ ಆತಂಕ.. ಮತ್ತೊಂದಡೆ ಮಕ್ಕಳ ಭವಿಷ್ಯದ ಪ್ರಶ್ನೆ.. ಯಾವುದು ಮುಖ್ಯ ಅನ್ನೋದು ಶಿಕ್ಷಣ ಇಲಾಖೆಯ ಟೆನ್ಷನ್ ಹೆಚ್ಚಿಸಿದೆ. ಇದೇ ಕಾರಣಕ್ಕೆ ತಜ್ಞರ ಜೊತೆ ಸಾಲು ಸಾಲು ಸಭೆ ನಡೆಸಿ ಶಾಲೆ ಓಪನ್ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಇದೇನೇ ಇದ್ರೂ ಸರ್ಕಾರ ಶಾಲೆ ಆರಂಭಿಸುತ್ತಾ ಇಲ್ವಾ ಅನ್ನೋದು ಇನ್ನು ಮೂರು ದಿನಗಳಲ್ಲಿ ಅಂತಿಮವಾಗೋದು ಮಾತ್ರ ಗ್ಯಾರಂಟಿ.